ಬೆಂಗಳೂರು: ಸಣ್ಣ ಬಿಸಿನೆಸ್ ಮೂಲಕ ತಿಂಗಳಿಗೆ ನಿಯಮಿತ ಅದಾಯ ಗಳಿಸುವವರು, 40-50 ಸಾವಿರ ರೂಪಾಯಿ ಸಂಬಳ ಪಡೆಯುವವರು ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮಾಡುವುದು ಈಗಿನ ಕಾಲದಲ್ಲಿ ಅನಿವಾರ್ಯವಾಗಿದೆ. ಅದರಲ್ಲೂ, ಮಕ್ಕಳ ಶಿಕ್ಷಣ, ಮನೆ ಕಟ್ಟುವುದು, ನಿವೇಶನ ಖರೀದಿ, ನಿವೃತ್ತಿ ಸೇರಿ ಹಲವು ಕಾರಣಗಳಿಗಾಗಿ ಮಾಸಿಕವಾಗಿ ಹಣ ಉಳಿಸುವುದು ಅತ್ಯಗತ್ಯವಾಗಿದೆ. ಹೀಗೆ ತಿಂಗಳು ತಿಂಗಳು ಹಣ ಉಳಿಸಿ, ಹೆಚ್ಚಿನ ಬಡ್ಡಿಯ ಲಾಭ ಗಳಿಸಲು ಪೋಸ್ಟ್ ಆಫೀಸಿನ ಪಿಪಿಎಫ್ ಯೋಜನೆಯು ಉತ್ತಮವಾಗಿದೆ.
ಹೌದು, ಕೇಂದ್ರ ಸರ್ಕಾರದ ಬೆಂಬಲ ಇರುವ ಯೋಜನೆ ಇದಾಗಿದೆ. ತಿಂಗಳಿಗೆ ನೀವು 12,500 ರೂಪಾಯಿಯಂತೆ, ವರ್ಷಕ್ಕೆ 1.5 ಲಕ್ಷ ರೂಪಾಯಿ ಉಳಿಸಬೇಕು. ಇದು ನಿಮಗೆ 15 ವರ್ಷಗಳ ಬಳಿಕ ಶೇ.7.1ರ ಬಡ್ಡಿದಂತೆ 40 ಲಕ್ಷ ರೂಪಾಯಿ ಗಳಿಕೆ ನೀಡುತ್ತದೆ. 15 ವರ್ಷಗಳ ನಂತರ, ನಿಮ್ಮ ಒಟ್ಟು ಹೂಡಿಕೆ 22,50,000 ರೂಪಾಯಿಗಳಾಗಿರುತ್ತದೆ. 7.1% ಬಡ್ಡಿ ಲಾಭವು ನಿಮ್ಮದಾಗುತ್ತದೆ.
ಶೇ.7.1ರ ಬಡ್ಡಿ ರಿಟರ್ನ್ಸ್ ಎಂದರೆ, ನೀವು 18,18,209 ರೂಪಾಯಿಗಳ ಬಡ್ಡಿಯನ್ನು ಗಳಿಸುವಿರಿ. ಮುಕ್ತಾಯದ ಸಮಯದಲ್ಲಿ, ನಿಮ್ಮ ಒಟ್ಟು ನಿಧಿ 40,68,209 ರೂಪಾಯಿಗಳಾಗಿರುತ್ತದೆ. ನಿಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ, ನೀವು ಹೂಡಿಕೆಯ ಮೊತ್ತವನ್ನು ನಿಗದಿಪಡಿಸಬಹುದು. ನೀವು ಹೆಚ್ಚು ಹೂಡಿಕೆ ಮಾಡಿದಷ್ಟೂ, ನಿಮ್ಮ ಆದಾಯವು ಹೆಚ್ಚಾಗುತ್ತ ಹೋಗುತ್ತದೆ.
ಅಷ್ಟೇ ಅಲ್ಲ, ನೀವು ಮೊದಲ ಹಣಕಾಸು ವರ್ಷದ ನಂತರ ನೀವು ಪಿಪಿಎಫ್ ಬ್ಯಾಲೆನ್ಸ್ ಮೇಲೆ ಸಾಲ ಪಡೆಯಬಹುದು. ನಿಮ್ಮ ಹೂಡಿಕೆ ಹಣಕ್ಕೆ ತೊಂದರೆಯಾಗದಂತೆ ನಿಮ್ಮ ತುರ್ತು ನಗದು ಅಗತ್ಯಗಳನ್ನು ಪೂರೈಸಬಹುದು. ಆರಂಭಿಕ ಹಿಂಪಡೆಯುವಿಕೆ ಆಯ್ಕೆಯೂ ಇದೆ. ಖಾತೆ ತೆರೆದ 5 ವರ್ಷಗಳ ನಂತರ ನೀವು ಸ್ವಲ್ಪ ಹಣವನ್ನು ಹಿಂಪಡೆಯಲು ಅವಕಾಶವಿದೆ.