ಬೆಂಗಳೂರು: ಕ್ರಿಕೆಟ್ ಜಗತ್ತು ಕಂಡ ಅದೆಷ್ಟೋ ದಿಗ್ಗಜರು ಮೈದಾನಕ್ಕಿಳಿಯುವ ಮುನ್ನ ಎದುರಾಳಿ ಬೌಲರ್‌ಗಳ ಬಗ್ಗೆ ರಣತಂತ್ರ ರೂಪಿಸುತ್ತಾರೆ. ಆದರೆ, ಕೇವಲ 14ನೇ ವಯಸ್ಸಿನಲ್ಲಿ ಐಪಿಎಲ್ ಅಂಗಳಕ್ಕೆ ಕಾಲಿಟ್ಟು ಇತಿಹಾಸ ನಿರ್ಮಿಸಿದ ಬಿಹಾರದ ಈ ಬಾಲಕನ ಪ್ಲಾನ್ ಮಾತ್ರ ವಿಭಿನ್ನವಾಗಿತ್ತು. 2025ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯುವ ಮುನ್ನ ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಅವರಿಗೆ ವೈಭವ್ ಸೂರ್ಯವಂಶಿ ನೀಡಿದ್ದ ಉತ್ತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. “ಹೇಗಿದ್ದರೂ ವಿಡಿಯೋ ಗೇಮ್ ಆಡುತ್ತಿರುವಷ್ಟೇ ಸುಲಭವಾಗಿ ಆಡುತ್ತಾನೆ” ಎಂದು ಸಂಜು ಸ್ಯಾಮ್ಸನ್ ಈ ಯುವ ಪ್ರತಿಭೆಯ ಬ್ಯಾಟಿಂಗ್ ಶೈಲಿಯನ್ನು ಬಣ್ಣಿಸಿದ್ದಾರೆ.
ದ್ರಾವಿಡ್ ಸಭೆಯಲ್ಲಿ ನಡೆದಿದ್ದೇನು?
ನಮನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಂಜು ಸ್ಯಾಮ್ಸನ್, 2025ರ ಐಪಿಎಲ್ ಸಮಯದ ಒಂದು ಕುತೂಹಲಕಾರಿ ಪ್ರಸಂಗವನ್ನು ನೆನಪಿಸಿಕೊಂಡರು. ಅಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ರಾಹುಲ್ ದ್ರಾವಿಡ್ ಅವರು ವೈಭವ್‌ನನ್ನು ತಮ್ಮ ಕೊಠಡಿಗೆ ಕರೆಸಿದ್ದರು. ಆತ ತುಂಬಾ ಚಿಕ್ಕ ಹುಡುಗನಾಗಿರುವುದರಿಂದ ಪಂದ್ಯದ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡುವ ಉದ್ದೇಶ ದ್ರಾವಿಡ್ ಅವರದಾಗಿತ್ತು. ಸಭೆಯಲ್ಲಿ ದ್ರಾವಿಡ್ “ನಿನ್ನ ಗೇಮ್ ಪ್ಲಾನ್ ಏನು ವೈಭವ್?” ಎಂದು ಕೇಳಿದಾಗ, ಆತ ಯಾವುದೇ ಅಂಜಿಕೆ ಇಲ್ಲದೆ “ಏನೂ ಇಲ್ಲ ಸರ್, ನಾನು ನನ್ನ ಸಹಜ ಆಟ ಆಡುತ್ತೇನೆ” ಎಂದು ಉತ್ತರಿಸಿದ್ದ. ಅಷ್ಟಕ್ಕೇ ನಿಲ್ಲದ ವೈಭವ್, “ಮೊದಲ ಎಸೆತವೇ ನನ್ನ ವಲಯಕ್ಕೆ (Zone) ಬಂದರೆ ಸಾಕು, ನಾನು ಅದನ್ನು ಮೊದಲೇ ಹಾರಿಸಿಬಿಡುತ್ತೇನೆ” ಅಂದರೆ ಸಿಕ್ಸರ್ ಸಿಡಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದ. ಇದನ್ನು ಕೇಳಿದ ದ್ರಾವಿಡ್ ಮತ್ತು ಸ್ಯಾಮ್ಸನ್ ಒಂದು ಕ್ಷಣ ಅಚ್ಚರಿಗೊಂಡಿದ್ದರು.
ಮೈದಾನದಲ್ಲಿ ಮಾತಿನಂತೆ ಆಟ
ವೈಭವ್ ಕೇವಲ ಮಾತಿನಲ್ಲಿ ಮಾತ್ರವಲ್ಲದೆ, ಮೈದಾನದಲ್ಲಿಯೂ ತನ್ನ ಮಾತನ್ನು ಉಳಿಸಿಕೊಂಡಿದ್ದ. ಶಾರ್ದೂಲ್ ಠಾಕೂರ್ ಎಸೆದ ಪಂದ್ಯದ ಮೊದಲ ಎಸೆತವನ್ನೇ ಅದ್ಭುತ ಸಿಕ್ಸರ್‌ಗೆ ಅಟ್ಟುವ ಮೂಲಕ ತನ್ನ ಐಪಿಎಲ್ ವೃತ್ತಿಜೀವನಕ್ಕೆ ಅದ್ದೂರಿ ಚಾಲನೆ ನೀಡಿದ್ದ. ಈ ಘಟನೆಯನ್ನು ಮೆಲುಕು ಹಾಕಿದ ಸ್ಯಾಮ್ಸನ್, “ಆತ ತನ್ನದೇ ಆದ ಒಂದು ಲೋಕದಲ್ಲಿದ್ದಾನೆ. ಪಂದ್ಯದ ಸನ್ನಿವೇಶ ಹೇಗೇ ಇರಲಿ, ಆತ ಮಾತ್ರ ಮೈದಾನದಲ್ಲಿ ವಿಡಿಯೋ ಗೇಮ್ ಆಡುತ್ತಿರುವಂತೆ ಅತ್ಯಂತ ಸರಾಗವಾಗಿ ಬ್ಯಾಟ್ ಮಾಡುತ್ತಾನೆ” ಎಂದು ಶ್ಲಾಘಿಸಿದ್ದಾರೆ. 14 ವರ್ಷ 23 ದಿನಗಳ ಪ್ರಾಯದಲ್ಲಿ ಐಪಿಎಲ್ ಪದಾರ್ಪಣೆ ಮಾಡಿದ ವೈಭವ್, ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ.
ದಾಖಲೆಗಳ ಸರದಾರ ಈ ಎಡಗೈ ಬ್ಯಾಟರ್
2025ರ ಐಪಿಎಲ್ ಹರಾಜಿನಲ್ಲಿ 1.10 ಕೋಟಿ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದ ವೈಭವ್ ಸೂರ್ಯವಂಶಿ, ಇಡೀ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ. ಗುಜರಾತ್ ಟೈಟಾನ್ಸ್ ವಿರುದ್ಧ ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಕೇವಲ 38 ಎಸೆತಗಳಲ್ಲಿ 101 ರನ್ ಸಿಡಿಸಿ ವೈಭವ್ ಇತಿಹಾಸ ನಿರ್ಮಿಸಿದ್ದ. ಇದು ಐಪಿಎಲ್ ಇತಿಹಾಸದಲ್ಲಿ ಭಾರತೀಯ ಆಟಗಾರನೊಬ್ಬ ಸಿಡಿಸಿದ ಅತಿ ವೇಗದ ಶತಕ ಮಾತ್ರವಲ್ಲದೆ, ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆಗೂ ಕಾರಣವಾಯಿತು. ಒಟ್ಟಾರೆ ಏಳು ಪಂದ್ಯಗಳಲ್ಲಿ 206.55ರ ಸ್ಟ್ರೈಕ್ ರೇಟ್‌ನಲ್ಲಿ 252 ರನ್ ಗಳಿಸಿದ್ದ ಈತ, ಮುಂಬರುವ 2026ರ ಐಪಿಎಲ್ ಆವೃತ್ತಿಗೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದಿಂದ ಉಳಿಸಿಕೊಳ್ಳಲ್ಪಟ್ಟ 13 ಆಟಗಾರರಲ್ಲಿ ಒಬ್ಬನಾಗಿದ್ದಾನೆ.
ಇದನ್ನೂ ಓದಿ : ಅತ್ಯಾಚಾರ ಆರೋಪದ ಸಂಕಷ್ಟದ ಮಧ್ಯೆ ಹಸೆಮಣೆ ಏರಿದ ಯಶ್ ದಯಾಳ್: ಕೊಹ್ಲಿ- ಆರ್‌ಸಿಬಿಗೆ ಹೆಚ್ಚಿದ ತಲೆನೋವು



















