ಪುನೀತ್ ರಾಜ್ಕುಮಾರ್ (Puneeth Rajkumar) ಈ ಹೆಸರೇ ಒಂದು ಶಕ್ತಿ. ಒಳ್ಳೆಯತನಕ್ಕೆ ಪ್ರೇರಣೆ. ಅಪ್ಪು ಎಂಬ ಹೆಸರಿಗೆ ಕನ್ನಡಿಗರು ರೋಮಾಂಚನಗೊಳ್ಳುತ್ತಾರೆ. ಅಭಿಮಾನಿಗಳಂತೂ ಈ ಹೆಸರನ್ನುತಮ್ಮ ಎದೆ ಮೇಲೆ ಬರೆಸಿಕೊಂಡಿದ್ದಾರೆ, ಎದೆಯೊಳಗೆ ಇಟ್ಟುಕೊಂಡಿದ್ದಾರೆ. ಅವರನ್ನು ನೆನೆದು ಭಾವುಕರಾಗುತ್ತಾರೆ. ಇಂಥ ವ್ಯಕ್ತಿ ಇನ್ನಿಲ್ಲವಾಗಿ ನಾಲ್ಕು ವರ್ಷಾನೇ ಆಗಿರಬಹುದು. ಆದಾಗ್ಯೂ ಕನ್ನಡಿಗರು ಅವರನ್ನು ನೆನೆಯದೆ ಇರೋ ದಿನಾನೇ ಇಲ್ಲ. ಪವರ್‌ಸ್ಟಾರ್ ಅಂದ್ರೆ ನೆನಪಾಗೋದು ಅಪ್ಪು. ಯುವರತ್ನ ಅಂದ್ರೆ ನೆನಪಾಗೋದು ಅಪ್ಪು. ರಾಜಕುಮಾರ ಅಂದ್ರೆ ನೆನಪಾಗೋದು ಅಪ್ಪು. ನಟಸಾರ್ವಭೌಮ ಅಂದ್ರೆ ನೆನಪಾಗೋದು ಅಪ್ಪುನೇ….
ಮಾರ್ಚ್ 17, 2022… ಅಭಿಮಾನಿಗಳ ನೆಚ್ಚಿನ ಅಪ್ಪು ಇಂದು ನಮ್ಮೊಂದಿಗೆ ಇದ್ದಿದ್ದರೆ ತಮ್ಮ 50ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ಪುನೀತ್ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ನಗುವಿನ ಒಡೆಯ ರಾಜಕುಮಾರ ಎಂದೆಂದಿಗೂ ಅಮರ. ಕನ್ನಡದ ಹೆಣ್ಣುಮಕ್ಕಳಿಗೆ ಇಷ್ಟವಾದ ಪಕ್ಕದ್ಮನೆ ಹುಡುಗ, ಅಪ್ಪು ಅಂದ್ರೆ ಗಂಧದ ಗುಡಿ, ನಗುಮೊಗದ ಒಡೆಯ, ಚಂದನವನದ ರಾಜಕುಮಾರ…ಅವರ ನೆನಪು ಮಾತ್ರ ಇಂದಿಗೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೇ ಉಳಿದಿದೆ.
ಪುನೀತ್ ಕಂಡರೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವ್ಯಕ್ತಿಗಳಿಗೂ ಅಚ್ಚುಮೆಚ್ಚು. ಅಂಥ ವ್ಯಕ್ತಿತ್ವ ಅಪ್ಪು ಅವರದ್ದು. ಅಷ್ಟು ದೊಡ್ಡ ಮನೆತನದಲ್ಲಿ ಜನಿಸಿ, ಸ್ಟಾರ್ ನಟನಾಗಿದ್ದರೂ ಯಾರನ್ನೇ ಆಗಲಿ ಒಂದಷ್ಟೂ ಹಮ್ಮು-ಬಿಮ್ಮು ತೋರದೆ ಮಾತನಾಡಿಸುತ್ತಿದ್ದರು. ಅವರಿದ್ದ ಕಡೆ ಒಂದು ರೀತಿಯ ಉತ್ಸಾಹ ಪುಟಿದೇಳುತ್ತಿತ್ತು. ಸ್ಯಾಂಡಲ್ವುಡ್ ನಟರಲ್ಲಿ ಅತ್ಯುತ್ತಮ ಡ್ಯಾನ್ಸರ್ ಎಂದು ಗುರುತಿಸಿಕೊಂಡವರು. ಇವರು ಬರೀ ನಟರಾಗಿಯೇ ಅಲ್ಲ, ನಿರೂಪಕರಾಗಿ, ಹಾಡುಗಾರರಾಗಿ, ಒಳ್ಳೆಯ ಡ್ಯಾನ್ಸರ್ ಹೀಗೆ ಬಹುಮುಖ ಪ್ರತಿಭೆಯನ್ನು ಹೊಂದಿದ್ದವರು.
ಅಮೋಘ ಅಭಿನಯ ಮಾತ್ರವಲ್ಲದೇ ತಮ್ಮ ಸರಳತೆ, ನಗು ಮತ್ತು ಮಾನವೀಯ ಸೇವಾಕಾರ್ಯಗಳಿಂದಲೂ ಹೆಚ್ಚು ಜನಪ್ರಿಯರಾದ ನಟ ಕನ್ನಡದಲ್ಲಿ ಪುನೀತ್. ದೊಡ್ಮನೆಯ ಹೆಸರನ್ನು ಉಳಿಸಿ ಬೆಳೆಸಿ ಬೆಳಗಿಸಿದ ಅಪ್ಪು ವಿನಯ ಸದಾಕಾಲ ಜನರಿಗೆ ನೆನಪಿನಲ್ಲಿ ಇರೋವಂಥದ್ದು. ಸ್ವತಃ ಪುನೀತ್ ರಾಜ್‌ಕುಮಾರ್ ಅವರು ಬಲಗೈಯಲ್ಲಿ ನೀಡಿದ ದಾನ ಎಡಗೈಗೆ ಗೊತ್ತಾಗಬಾರದು ಅನ್ನುವ ಹಾಗೆ ಇದ್ದವರು.
1975, ಮಾರ್ಚ್ 17ರಂದು ಜನಿಸಿದ ಪುನೀತ್ ರಾಜ್ಕುಮಾರ್ ರಾಜ್ ಕುಟುಂಬದ ಕಿರಿಯ ಸದಸ್ಯನಾಗಿದ್ದ ಕಾರಣಕ್ಕೆ ಮನೆಯವರಿಗೆ ಅವರೆಂದರೆ ತುಂಬಾ ಪ್ರೀತಿ. ಅಕ್ಕ-ಅಣ್ಣಂದಿರ ಮುದ್ದಿನ ತಮ್ಮನಾಗಿದ್ದ ಪುನೀತ್ ಬಾಲ ನಟನಾಗಿ ಚಿತ್ರರಂಗಕ್ಕೆ ಪರಿಚಯವಾದ ಬಳಿಕ ಕರ್ನಾಟಕದ ಮನೆಮಗನಾದರು. ‘ಅಪ್ಪು’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ‘ಅಪ್ಪು’ 49 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಪ್ರತಿಯೊಂದು ಚಿತ್ರವೂ ಹಿಟ್ ಲಿಸ್ಟ್‌ಗೆ ಸೇರಿದೆ. ಈ ರೀತಿಯಾಗಿ ಕನ್ನಡದ ಕಣ್ಮಣಿಯಾಗಿರು ಅಪ್ಪು ಬಗೆಗಿನ ಇನ್ನಷ್ಟು ಆಸಕ್ತಿದಾಯಕ ವಿಷಯಗಳು ಇಲ್ಲಿವೆ ಓದಿ.
ಬಾಲ್ಯದಲ್ಲಿಏಐ ನಟನೆ
ಪುನೀತ್ ಎಲ್ಲರಿಗೂ ಪುನೀತ್ ಬಾಲ ನಟನಾಗಿದ್ದರು ಎಂಬುದು ಗೊತ್ತು. ಆದರೆ ಅವರು ಅಂಬೆಗಾಲಿಡುತ್ತಿರುವಾಗಲೇ ಅಂದರೆ 6 ತಿಂಗಳ ಮಗುವಾಗಿದ್ದಾಗಲೇ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದರು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. 1976ರಲ್ಲಿ ಬಿಡುಗಡೆಯಾದ ‘ಪ್ರೇಮದ ಕಾಣಿಕೆ’ ಚಿತ್ರದಲ್ಲಿ ಮಗುವಾಗಿದ್ದ ಪುನೀತ್ ಅವರನ್ನು ತೋರಿಸಲಾಗಿದೆ. ಅದರಲ್ಲಿ ಅವರ ತಂದೆ ವರನಟ ರಾಜ್ಮಾರ್ ನಾಯಕ ಪಾತ್ರದಲ್ಲಿದ್ದರು. ಆ ಚಿತ್ರ ಬ್ಲಾಕ್ಬಸ್ಟರ್ ಆಗಿತ್ತು.
6 ವರ್ಷದವರಾಗಿದ್ದಾಗಲೇ ಗಾಯನ
‘ಬೊಂಬೆ ಹೇಳತೈತೆ’, ‘ನಿನ್ನಿಂದಲೇ’ ಮುಂತಾದ ಹಾಡುಗಳಲ್ಲಿ ಪುನೀತ್ ರಾಜ್ಕುಮಾರ್ ಅವರ ಮಧುರ ಧ್ವನಿ ಕೇಳಿದ್ದೇವೆ. ಆದರೆ ಅವರು 6 ವರ್ಷದವರಾಗಿದ್ದಾಗಲೇ ಹಾಡು ಹಾಡಿದ್ದಾರೆ. ಅವರ ಮೊದಲ ಹಾಡು ‘ಬಾನ ಧರೆಯಲ್ಲಿ ಸೂರ್ಯ’ ಹಾಡನ್ನು ಹಾಡಿದ್ದಾರೆ. ‘ಭಾಗ್ಯವಂತ’ ಚಿತ್ರದಲ್ಲಿ ಈ ಹಾಡು ಇದೆ, ಈ ಚಿತ್ರ 1982ರಲ್ಲಿ ಬಿಡುಗಡೆಯಾಗಿತ್ತು.
ಅತ್ಯುತ್ತಮ ಬಾಲ ನಟ ಪ್ರಶಸ್ತಿ
ಕನ್ನಡ ಚಿತ್ರರಂಗ ಇತಿಹಾಸದಲ್ಲಿಯೇ ಮೊದಲ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದವರು ಪುನೀತ್ ರಾಜ್ಕುಮಾರ್. 1982-83ರಲ್ಲಿ ಬಿಡುಗಡೆಯಾದ ‘ಚಲಿಸುವ ಮೋಡಗಳು’ ಚಿತ್ರದಲ್ಲಿ ಇವರ ಅಭಿನಯಕ್ಕೆ ಆ ಪ್ರಶಸ್ತಿ ಲಭಿಸಿತು.
ಮಾಸ್ಟರ್ ಲೋಹಿತ್ ಅಪ್ಪು ಆಗಿದ್ದು ಹೇಗೆ…?
ಮಾಸ್ಟರ್ ಲೋಹಿತ್‌ಗೆ ‘ಅಪ್ಪು’ ಎಂದು ಮುದ್ದಾಗಿ ಹೆಸರಿಟ್ಟಿದ್ದು ಡಾ. ರಾಜ್ಕುಮಾರ್ ಅವರ ತಾಯಿ ಲಕ್ಷ್ಮಮ್ಮನವರು. ತಮ್ಮ ಮುದ್ದಿನ ಕೊನೆಯ ಮೊಮ್ಮಗನನ್ನು ಪ್ರೀತಿಯಿಂದ ‘ಅಪ್ಪು’ ಎಂದು ಕರೆಯುತ್ತಿದ್ದರು. ಅದೇ ಹೆಸರಿನಲ್ಲೇ ಮನೆಯಲ್ಲೂ ಎಲ್ಲರೂ ಕರೆಯಲು ಶುರು ಮಾಡಿದರು. ಇದೇ ಹೆಸರು ಅವರ ಪೂರ್ಣ ಪ್ರಮಾಣದ ನಾಯಕನಾದ ಚಿತ್ರಕ್ಕೂ ಟೈಟಲ್ ಆಯಿತು.
‘ಅಪ್ಪು’ ಹೆಸರನ್ನು ಮಾಸ್ಟರ್ ಲೋಹಿತ್‌ನಿಂದ ಮಾಸ್ಟರ್ ಪುನೀತ್ ಎಂದು ಬದಲಾಯಿಸಲಾಯಿತು. ಸುಮಾರು 16 ಚಿತ್ರಗಳಲ್ಲಿ ಮಾಸ್ಟರ್ ಲೋಹಿತ್ ಹೆಸರಿನಲ್ಲೇ ಕಾಣಿಸಿಕೊಂಡಿದ್ದರು. ಆದರೆ ಮಾರ್ಚ್ 16, 1985ರಲ್ಲಿ ಮಾಸ್ಟರ್ ಪುನೀತ್ ಎಂದು ಹೆಸರು ಬದಲಾವಣೆ ಮಾಡಲಾಯಿತು. ಈ ಬಗ್ಗೆ ಅಧಿಕೃತವಾಗಿ ನಿಯಮದಂತೆ ಪೇಪರ್‌ನಲ್ಲಿ ಪ್ರಕಟಣೆ ಕೂಡ ನೀಡಲಾಗಿತ್ತು. ಈ ಮೂಲಕ ಅಪ್ಪು ಪುನೀತ್ ರಾಜ್ಕುಮಾರ್ ಎಂದು ನಾಮಾಂಕಿತಗೊಂಡರು.
ರಾಷ್ಟ್ರೀಯ ಪ್ರಶಸ್ತಿ
1985ರಲ್ಲಿ ‘ಬೆಟ್ಟದ ಹೂವು’ ಸಿನಿಮಾಗಾಗಿ ಅಪ್ಪು ನ್ಯಾಷನಲ್ ಅವಾರ್ಡ್ ಮುಡಿಗೇರಿಸಿಕೊಂಡಿದ್ದರು. ‘ಬೆಟ್ಟದ ಹೂವು’ ಚಿತ್ರದಲ್ಲಿ ಮನೋಜ್ಞವಾಗಿ ನಟನೆ ಮಾಡಿ ಅತಿ ಚಿಕ್ಕ ವಯಸ್ಸಿನಲ್ಲೇ ಅವಾರ್ಡ್ ಪಡೆದುಕೊಂಡ ಕೀರ್ತಿ ಅಪ್ಪುಗೆ ಸಲ್ಲುತ್ತದೆ.