ನವದೆಹಲಿ : ಕಾಂಗ್ರೆಸ್‌ನಿಂದ ಹೊರಬಂದಿರುವ ಮಾಜಿ ಶಾಸಕಿ ನವಜೋತ್ ಕೌರ್ ಸಿಧು, ಇದೀಗ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರಿಗೆ ನೆಲದ ವಾಸ್ತವದ ಅರಿವಿಲ್ಲ ಮತ್ತು ಅವರು ಹೇಳುವುದಕ್ಕೂ ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿಧು ಕಿಡಿಕಾರಿದ್ದಾರೆ. ಕೊಯಮತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಪಂಜಾಬ್ ಘಟಕದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರು ಎಂದಿಗೂ ತಳಮಟ್ಟದಲ್ಲಿ ಕೆಲಸ ಮಾಡಿಲ್ಲ, ಹೀಗಾಗಿ ಅವರಿಗೆ ಗ್ರೌಂಡ್ ಜೀರೋದಲ್ಲಿ ಏನಾಗುತ್ತಿದೆ ಎಂಬುದು ತಿಳಿದಿಲ್ಲ. “ನಾಯಕರಾದವರು ವಾಸ್ತವದೊಂದಿಗೆ ಸಂಪರ್ಕ ಹೊಂದಿರಬೇಕು, ಅದನ್ನು ಬಿಟ್ಟು ಕನಸಿನ ಲೋಕದಲ್ಲಿ ಬದುಕಲು ಸಾಧ್ಯವಿಲ್ಲ” ಎಂದು ಅವರು ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ಪ್ರಧಾನಿ ವಿರುದ್ಧ ವೈಯಕ್ತಿಕವಾಗಿ ಒಂದೇ ಒಂದು ಪೈಸೆ ಭ್ರಷ್ಟಾಚಾರದ ಆರೋಪ ಮಾಡಲು ಸಾಧ್ಯವಿಲ್ಲ. ಆದರೆ ರಾಹುಲ್ ಗಾಂಧಿ ಮಾತುಗಳು ಚೆನ್ನಾಗಿರುತ್ತವೆ, ಆದರೆ ಅವರ ನಡವಳಿಕೆಯಲ್ಲಿ ಪ್ರಾಮಾಣಿಕತೆ ಇಲ್ಲ ಎಂದಿದ್ದಾರೆ.
ಪಂಜಾಬ್ ಕಾಂಗ್ರೆಸ್‌ನಲ್ಲಿ ಟಿಕೆಟ್ ಮಾರಾಟದ ಆರೋಪ
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರು ಮಾಡುತ್ತಿರುವ ಅನ್ಯಾಯದ ಬಗ್ಗೆ ವಿವರಿಸಲು ಕಳೆದ ಎಂಟು ತಿಂಗಳಿಂದ ರಾಹುಲ್ ಗಾಂಧಿ ಅವರ ಭೇಟಿಗೆ ಪ್ರಯತ್ನಿಸಿದರೂ ಅವಕಾಶ ಸಿಗಲಿಲ್ಲ ಎಂದು ನವಜೋತ್ ಕೌರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಿಮ್ಮ ಪಕ್ಷ ಪಂಜಾಬ್‌ನಲ್ಲಿ ನಾಶವಾಗುತ್ತಿದೆ ಎಂದು ಹೇಳಲು ನಾನು ಸಮಯ ಕೇಳಿದ್ದೆ. ಅಲ್ಲಿ ಈಗಾಗಲೇ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ನಿಮ್ಮ ಕೆಳಗೆ ಏನಾಗುತ್ತಿದೆ ಎಂಬ ಅರಿವಿಲ್ಲದಿದ್ದರೆ, ನೀವು ಆ ಕುರ್ಚಿಯಲ್ಲಿ ಕೂರಲು ಅರ್ಹರಲ್ಲ” ಎಂದಿರುವ ಅವರು, ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲಿದೆ ಎಂದೂ ಭವಿಷ್ಯ ನುಡಿದಿದ್ದಾರೆ.
ಕೊಟ್ಟ ಮಾತು ಉಳಿಸಿಕೊಳ್ಳದ ಹೈಕಮಾಂಡ್
ಕಾಂಗ್ರೆಸ್‌ಗಾಗಿ ನಾವು ಎಲ್ಲವನ್ನೂ ತ್ಯಾಗ ಮಾಡಿದ್ದೆವು. ನಮಗೆ ಉಪಮುಖ್ಯಮಂತ್ರಿ ಹುದ್ದೆ ಹಾಗೂ ಏಳು ಪ್ರಮುಖ ಇಲಾಖೆಗಳನ್ನು ನೀಡುವುದಾಗಿ ಮತ್ತು ನನ್ನನ್ನು ಸಂಸದೆಯನ್ನಾಗಿ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಯಾವುದನ್ನೂ ಈಡೇರಿಸಲಿಲ್ಲ ಎಂದು ಸಿಧು ದೂರಿದ್ದಾರೆ. ಭ್ರಷ್ಟರನ್ನೇ ಸುತ್ತಮುತ್ತ ಇಟ್ಟುಕೊಂಡು ಭ್ರಷ್ಟಾಚಾರದ ವಿರುದ್ಧ ಮಾತನಾಡುವುದು ಹಾಸ್ಯಾಸ್ಪದ ಎಂದು ಅವರು ಹೈಕಮಾಂಡ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಮುಖ್ಯಮಂತ್ರಿ ಹುದ್ದೆಗಾಗಿ 500 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದಾರೆ ಎಂದು ಈ ಹಿಂದೆ ಸಿಧು ಮಾಡಿದ್ದ ಆರೋಪ ರಾಜ್ಯ ರಾಜಕಾರಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ : ಭಾರತದಲ್ಲಿ ಜೀಪ್ ಮೆರಿಡಿಯನ್ ‘ಟ್ರ್ಯಾಕ್ ಎಡಿಷನ್’ ಬಿಡುಗಡೆ | ಬೆಲೆ 35.95 ಲಕ್ಷದಿಂದ ಆರಂಭ!



















