ಬೆಂಗಳೂರು : ನೀವು ಸಾಲ ಮಾಡಿ ಕಾರು ಅಥವಾ ಬೈಕ್ ಖರೀದಿಸಿದ್ದೀರಾ? ಪ್ರತಿ ತಿಂಗಳು ಇಎಐಂ ಪಾವತಿಸಿ, ಸಾಲವನ್ನು ತೀರಿಸಿದ್ದೀರಾ? ಹಾಗಾದರೆ ನಿಮಗೊಂದು ಸಿಹಿ ಸುದ್ದಿ ಇದೆ. ಹೌದು, ಇನ್ನುಮುಂದೆ ಸಾಲ ತೀರಿಸಿದ ಬಳಿಕ ಆರ್‌ಸಿ ಕಾರ್ಡ್ ಮಾಹಿತಿ ಅಪ್ಡೇಟ್ ಮಾಡಲು ನೀವು RTO ಕಚೇರಿಗಳಿಗೆ ಅಲೆಯುವ ಅಗತ್ಯವೇ ಇಲ್ಲ. ಇನ್ನುಮುಂದೆ ಮನೆಯಲ್ಲೇ ಕುಳಿತು ನೀವು ಆರ್ ಸಿ ಕಾರ್ಡ್ ಅಪ್ಡೇಟ್ ಮಾಡಬಹುದಾಗಿದೆ.
ನೀವು ಯಾವುದೇ ಫೈನಾನ್ಸ್ ಕಂಪನಿಯಿಂದ ಸಾಲ ಪಡೆದು ಬೈಕ್ ಅಥವಾ ಕಾರು ಖರೀದಿಸಿದಾಗ, ನಿಮ್ಮ ವಾಹನದ ಆರ್ ಸಿ ಕಾರ್ಡ್ ನ ಹೈಪೊತಿಫಿಕೇಷನ್ (Hypothecation) ವಿಭಾಗದಲ್ಲಿ ಸಾಲ ನೀಡಿದ ಸಂಸ್ಥೆಯ ಹೆಸರು ಇರುತ್ತದೆ. ಅಂದರೆ, ನಿಮ್ಮ ವಾಹನವು ಅಡಮಾನದಲ್ಲಿ ಇರಿಸಲಾಗಿದೆ ಎಂಬುದು ಇದರ ಅರ್ಥ. ಆದರೆ, ನೀವು ಸಾಲ ತೀರಿಸಿದ ಬಳಿಕ ಆರ್ ಸಿ ಕಾರ್ಡ್ ನಲ್ಲಿ ಹೈಪೊತಿಫಿಕೇಷನ್ ಟರ್ಮಿನೇಷನ್ (Hypothecation Termination) ಎಂಬ ಅಪ್ಡೇಟ್ ಮಾಡಬೇಕು. ಹೀಗೆ ಅಪ್ ಡೇಟ್ ಮಾಡಿದರೆ ನಿಮ್ಮ ವಾಹನವು ಅಡಮಾನದಲ್ಲಿ ಇಲ್ಲ ಎಂಬುದು ದೃಢವಾಗುತ್ತದೆ. ಆದರೆ, ಇದಕ್ಕೂ ಮೊದಲು ಅಪ್ಡೇಟ್ ಮಾಡಲು ಆರ್ ಟಿಒ ಕಚೇರಿಗಳಿಗೆ ಅಲೆದಾಡಬೇಕಿತ್ತು. ಈಗ ಇದನ್ನು ಮನೆಯಲ್ಲೇ ಕುಳಿತು ಅಪ್ಡೇಟ್ ಮಾಡಬಹುದಾಗಿದೆ.
ಅಗತ್ಯವಿರುವ ದಾಖಲೆಗಳು ಏನೇನು?
ಬ್ಯಾಂಕ್ ಎನ್ಒಸಿ: ಸಾಲ ಪೂರ್ಣಗೊಂಡ ಬಗ್ಗೆ ಬ್ಯಾಂಕ್ ನೀಡುವ ಪತ್ರ.
ಫಾರ್ಮ್ 35: ಬ್ಯಾಂಕ್ನಿಂದ ಸಹಿ ಮಾಡಿದ ಎರಡು ಪ್ರತಿಗಳು.
ಮೂಲ ಆರ್ ಸಿ: ಸ್ಮಾರ್ಟ್ ಕಾರ್ಡ್ ಅಥವಾ ಪೇಪರ್ ಆರ್ ಸಿ.
ವಿಮೆ: ಚಾಲ್ತಿಯಲ್ಲಿರುವ ವಾಹನ ವಿಮೆ ಪ್ರತಿ.
ಪಿಯುಸಿ: ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ.
ವಿಳಾಸ ದಾಖಲೆ: ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ.
ಆನ್ ಲೈನ್ ಮೂಲಕ ಅಪ್ಡೇಟ್ ಮಾಡುವುದು ಹೇಗೆ?
• ಪರಿವಾಹನ ವೆಬ್ ಸೈಟ್ https://vahan.parivahan.gov.in/vahaneservice/login/ ಗೆ ಲಾಗ್ ಇನ್ ಆಗಿ.
• ನಿಮ್ಮ ವಾಹನದ ನೋಂದಣಿ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಯ ಕೊನೆಯ 5 ಅಂಕಿಗಳನ್ನು ನಮೂದಿಸಿ.
• ‘Online Services’ ಅಡಿಯಲ್ಲಿ ‘Hypothecation Termination’ ಆಯ್ಕೆಯನ್ನು ಆರಿಸಿ.
• ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ ಲೋಡ್ ಮಾಡಿ.
• ನಿಗದಿತ ಶುಲ್ಕವನ್ನು (ಸಾಮಾನ್ಯವಾಗಿ 100 – 500 ರೂ.ವರೆಗೆ ಇರುತ್ತದೆ) ಪಾವತಿಸಿ.
• ಕೆಲವು ಸಂದರ್ಭಗಳಲ್ಲಿ, ಆನ್ ಲೈನ್ ಅರ್ಜಿಯ ನಂತರ ಮೂಲ ದಾಖಲೆಗಳನ್ನು ನಿಮ್ಮ ಸ್ಥಳೀಯ RTO ಕಚೇರಿಗೆ ಸಲ್ಲಿಸಬೇಕಾಗಬಹುದು ಎಂಬುದು ತಿಳಿದಿರಲಿ.
ಇದನ್ನೂ ಓದಿ : ಸತತ ಮೂರು ಶೂನ್ಯ ಸುತ್ತಿದರೂ ಅಭಿಷೇಕ್ ಶರ್ಮಾ ಬೆನ್ನಿಗೆ ನಿಂತ ಟೀಮ್ ಇಂಡಿಯಾ


















