ನವದೆಹಲಿ: 2021ರ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರ ಕುರಿತು ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮ್ಮ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಕಂಗನಾ ಅವರ ಟ್ವೀಟ್ ಕೇವಲ ‘ರಿಟ್ವೀಟ್’ ಆಗಿರಲಿಲ್ಲ, ಅದಕ್ಕೆ ಅವರು ತಮ್ಮದೇ ಆದ ಟೀಕೆಗಳನ್ನು ಸೇರಿಸಿದ್ದಾರೆ ಎಂದು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರು ಗಮನಸೆಳೆದರು. “ಇದು ಕೇವಲ ರಿಟ್ವೀಟ್ ಅಲ್ಲ. ನೀವು ಅದಕ್ಕೆ ನಿಮ್ಮದೇ ಆದ ಕಾಮೆಂಟ್‌ಗಳನ್ನು ಸೇರಿಸುವ ಮೂಲಕ ಮಸಾಲೆ ಹಾಕಿದ್ದೀರಿ,” ಎಂದು ನ್ಯಾಯಮೂರ್ತಿಗಳು ಕಟುವಾಗಿ ನುಡಿದರು.
ಕಂಗನಾ ಪರ ವಕೀಲರು, ತಾವು ಈಗಾಗಲೇ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ್ದು, ಪಂಜಾಬ್‌ನಲ್ಲಿ ವಿಚಾರಣೆಗೆ ಹಾಜರಾಗಲು ಭದ್ರತಾ ಸಮಸ್ಯೆಗಳಿವೆ ಎಂದು ವಾದಿಸಿದರು. ಆದರೆ, ಪೀಠವು ಈ ವಾದವನ್ನು ತಿರಸ್ಕರಿಸಿತು. “ನಿಮ್ಮ ಟ್ವೀಟ್‌ನಲ್ಲಿ ಬರೆದಿರುವ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡುವಂತೆ ಕೇಳಬೇಡಿ. ಅದು ನಿಮ್ಮ ವಿಚಾರಣೆಯ ಮೇಲೆ ಪರಿಣಾಮ ಬೀರಬಹುದು. ವಿಚಾರಣಾ ನ್ಯಾಯಾಲಯದ ಮುಂದೆ ನಿಮ್ಮ ವಾದವನ್ನು ಮಂಡಿಸಲು ನಿಮಗೆ ಅವಕಾಶವಿದೆ,” ಎಂದು ಪೀಠ ಸಲಹೆ ನೀಡಿತು.
ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಪಡೆಯುವಂತೆ ನ್ಯಾಯಾಲಯ ಸೂಚಿಸಿದ ನಂತರ, ಕಂಗನಾ ಅವರ ಅರ್ಜಿಯನ್ನು ಹಿಂಪಡೆಯಲಾಯಿತು.
ಪ್ರಕರಣದ ಹಿನ್ನೆಲೆ
2021ರಲ್ಲಿ ನಡೆದ ಕೃಷಿ ಕಾನೂನು ವಿರೋಧಿ ರೈತರ ಪ್ರತಿಭಟನೆಯ ಸಂದರ್ಭದಲ್ಲಿ, ಕಂಗನಾ ರನೌತ್ ಅವರು ವಯೋವೃದ್ಧ ಪ್ರತಿಭಟನಾಕಾರರಾದ ಮಹಿಂದರ್ ಕೌರ್ ಅವರ ಫೋಟೋವನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಮಹಿಂದರ್ ಕೌರ್ ಅವರನ್ನು ಶಾಹೀನ್ ಬಾಗ್ ಪ್ರತಿಭಟನೆಯಲ್ಲಿ ಖ್ಯಾತಿ ಪಡೆದಿದ್ದ ‘ಬಿಲ್ಕಿಸ್ ದಾ’ ಎಂದು ಹೇಳಿದ್ದಲ್ಲದೇ, “ಅವರು 100 ರೂಪಾಯಿಗೆ ಲಭ್ಯ” ಎಂದು ಬರೆದುಕೊಂಡಿದ್ದರು. ಆ ಮೂಲಕ ಪ್ರತಿಭಟನಾಕಾರರು ಹಣಕ್ಕಾಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ ಎಂಬರ್ಥದಲ್ಲಿ ವ್ಯಾಖ್ಯಾನಿಸಲಾಗಿತ್ತು.
ಈ ಹೇಳಿಕೆಯ ವಿರುದ್ಧ ಮಹಿಂದರ್ ಕೌರ್ ಅವರು ಬಟಿಂಡಾ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ನ್ಯಾಯಾಲಯವು ಮೇಲ್ನೋಟಕ್ಕೆ ಇದು ಮಾನನಷ್ಟವಾಗಿದೆ ಎಂದು ಪರಿಗಣಿಸಿ ಕಂಗನಾಗೆ ಸಮನ್ಸ್ ಜಾರಿ ಮಾಡಿತ್ತು. ಈ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಕಂಗನಾ ಸಲ್ಲಿಸಿದ್ದ ಅರ್ಜಿಯನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಈ ಹಿಂದೆ ತಿರಸ್ಕರಿಸಿತ್ತು.