ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದ ಬಳಿಕ ಗೋವುಗಳ ರಕ್ಷಣೆಗೆ ಆದ್ಯತೆ ನೀಡಿದ್ದಾರೆ. ಅದರಲ್ಲೂ, ಮಾಲೀಕರು ಇಲ್ಲದ, ಬೀದಿ ಗೋವುಗಳ ರಕ್ಷಣೆಗೆ ಯೋಜನೆಗಳನ್ನು ರೂಪಿಸಿದ್ದಾರೆ. ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರವು ಕಳೆದ 8 ವರ್ಷಗಳಲ್ಲಿ ರಾಜ್ಯಾದ್ಯಂತ 7,713 ಗೋಶಾಲೆಗಳನ್ನು ನಿರ್ಮಿಸಿದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ.
ಕಳೆದ ಎಂಟು ವರ್ಷಗಳಲ್ಲಿ 7,713 ಗೋಶಾಲೆಗಳನ್ನು ಸ್ಥಾಪಿಸುವ ಮೂಲಕ ಸುಮಾರು 16 ಲಕ್ಷ ಗೋವುಗಳಿಗೆ ಆಶ್ರಯ ನೀಡಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರವು ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸಿದೆ ಎಂದು ವರದಿಯಿಂದ ತಿಳಿದುಬಂದಿದೆ. 2017ರಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ಗೋವುಗಳ ರಕ್ಷಣೆಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಇದರ ಫಲವಾಗಿ ಲಕ್ಷಾಂತರ ಗೋವುಗಳು ಈಗ ಆಶ್ರಯ ಪಡೆದಿವೆ ಎಂದು ತಿಳಿದುಬಂದಿದೆ.
ಗೋವುಗಳ ರಕ್ಷಣೆ ಜತೆಗೆ ಅವುಗಳನ್ನು ಕೃಷಿಕರು, ಸಾಕಣೆ ಮಾಡುವವರಿಗೆ ನೀಡಲಾಗಿದೆ. ಇದಕ್ಕಾಗಿಯೇ ಮುಖ್ಯಮಂತ್ರಿ ಸಹಭಾಗಿತಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಅನ್ವಯ, ಮಾಲೀಕರಿಲ್ಲದ ಗೋವುಗಳನ್ನು ರಕ್ಷಣೆ ಮಾಡಿ, ಅವುಗಳನ್ನು ಕೃಷಿಕರು ಹಾಗೂ ಸಾಕುವ ಇಚ್ಛೆ ಇರುವವರಿಗೆ ನೀಡಲಾಗಿದೆ. ಅದರಂತೆ, 2.37 ಲಕ್ಷ ಗೋವುಗಳನ್ನು ಹೀಗೆ ಬೇರೆಯವರಿಗೆ ನೀಡಲಾಗಿದೆ.
ಚರ್ಮ ರೋಗ ಸೇರಿ ಹಲವು ರೋಗಗಳಿಂದ ಬಳಲುತ್ತಿದ್ದ ಪ್ರಾಣಿಗಳನ್ನು ಗುರುತಿಸಿ, ಅವುಗಳಿಗೆ ಲಸಿಕೆ ಹಾಕಿಸುವ ಅಭಿಯಾನವನ್ನೂ ಉತ್ತರ ಪ್ರದೇಶ ಸರ್ಕಾರ ತೆಗೆದುಕೊಂಡಿದೆ. ಇದರಿಂದಾಗಿ ಒಟ್ಟು 14.5 ಕೋಟಿ ಪ್ರಾಣಿಗಳಿಗೆ ಇದುವರೆಗೆ ಲಸಿಕೆ ಹಾಕಿಸಲಾಗಿದೆ ಎಂದು ತಿಳಿದುಬಂದಿದೆ.



















