ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ದೇಶದ ಅತ್ಯಂತ ಜನಪ್ರಿಯ ಸಿಎಂ ಎನಿಸಿದ್ದಾರೆ. ಧರ್ಮ-ಸಂಸ್ಕೃತಿಯ ರಕ್ಷಣೆ, ಖಡಕ್ ನಿರ್ಧಾರಗಳು, ವಾಕ್ಚಾತುರ್ಯ, ಅಪರಾಧ ನಿಗ್ರಹ ಸೇರಿ ಹಲವು ಕಾರಣಗಳಿಂದಾಗಿ ಜನ ಅವರನ್ನು ಇಷ್ಟಪಡುತ್ತಾರೆ. ಅಲ್ಲದೆ, ಮೋದಿ ಅವರ ನಂತರ ಯೋಗಿಯೇ ದೇಶದ ಪ್ರಧಾನಿಯಾಗಲಿದ್ದಾರೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಆದರೆ, ಇದರ ಕುರಿತು ಸ್ಪಷ್ಟನೆ ನೀಡಿರುವ ಯೋಗಿ ಆದಿತ್ಯನಾಥ್ ಅವರು, “ನಾನು ಯಾರಿಗೂ ಉತ್ತರಾಧಿಕಾರಿ ಅಲ್ಲ. ನಾನೊಬ್ಬ ಯೋಗಿ ಮಾತ್ರ” ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಇಂಡಿಯಾ ಟುಡೇ ಕಾನ್ ಕ್ಲೇವ್ ನಲ್ಲಿ ಯೋಗಿ ಆದಿತ್ಯನಾಥ್ ಮಾತನಾಡಿದರು. ಇದೇ ವೇಳೆ ಬಿಜೆಪಿಯಲ್ಲಿ ಭವಿಷ್ಯದ ನಾಯಕತ್ವದ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. “ನಾನು ಯಾರಿಗೂ ಉತ್ತರಾಧಿಕಾರಿ ಅಲ್ಲ. ನಾನೊಬ್ಬ ಯೋಗಿ. ಯೋಗಿಯಾಗಿಯೇ ನಾನು ಕೆಲಸ ಮಾಡಲು, ಜನರ ಸೇವೆ ಮಾಡಲು, ಧರ್ಮ, ಅಧ್ಯಾತ್ಮದ ಪಥದಲ್ಲಿ ಸಾಗಲು ಇಷ್ಟಪಡುತ್ತೇನೆ” ಎಂದು ಅವರು ಸ್ಪಷ್ಟಪಡಿಸಿದರು.
“ನಾನು ಎಂದಿಗೂ ಭಾರತಮಾತೆಯ ಸೇವಕ. ನನಗೆ ಉತ್ತರ ಪ್ರದೇಶದ ಜವಾಬ್ದಾರಿ ನೀಡಲಾಗಿದೆ. ನಾನು ಆ ಜವಾಬ್ದಾರಿಯನ್ನು ಮಾತ್ರ ನಿಭಾಯಿಸುತ್ತಿದ್ದೇನೆ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ನಾನು ಮತ್ತೆ ಗೋರಖಪುರಕ್ಕೆ ಹೋಗಬೇಕಾದ ಸಮಯ ಬಂದರೆ, ಅಲ್ಲಿಗೆ ಖುಷಿಯಿಂದ ತೆರಳಿ. ನಾನು ಮತ್ತೆ ನನ್ನ ಧಾರ್ಮಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇನೆ. ಯೋಗಿ ಧರ್ಮ ಪಾಲನೆ ಮಾಡುವುದರಲ್ಲಿ ನನಗೆ ಖುಷಿ ಇದೆ” ಎಂದು ತಿಳಿಸಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಸಿಎಂ ಆಗಿ ದೇಶಾದ್ಯಂತ ಮನೆಮಾತಾಗಿದ್ದಾರೆ. ಅವರು ಖಡಕ್ ತೀರ್ಮಾನಗಳನ್ನು ತೆಗೆದುಕೊಂಡಾಗಲೆಲ್ಲ ಮೋದಿ ಜತೆ ಹೋಲಿಕೆ ಮಾಡಲಾಗುತ್ತದೆ. ಹಾಗಾಗಿಯೇ, ಮೋದಿ ಅವರ ನಂತರ ಯೋಗಿ ಅವರೇ ದೇಶದ ಪಿಎಂ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಆದರೆ, ತಮ್ಮ ಜವಾಬ್ದಾರಿ, ಪಾತ್ರ, ದಾರಿಯ ಕುರಿತು ಯೋಗಿ ಈಗ ಸ್ಪಷ್ಟಪಡಿಸಿದ್ದಾರೆ.