ಲಕ್ನೋ: ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಇತಿಹಾಸದಲ್ಲಿ ಅತಿ ದೀರ್ಘ ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಅವರು, ಗೋವಿಂದ್ ಬಲ್ಲಭ್ ಪಂತ್ ಅವರ ದೀರ್ಘಕಾಲದ ದಾಖಲೆಯನ್ನು ಮುರಿದಿದ್ದಾರೆ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಸತತವಾಗಿ ದೀರ್ಘಾವಧಿಗೆ ಸೇವೆ ಸಲ್ಲಿಸಿದ ಪ್ರಧಾನಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗಿ, ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ದಾಖಲೆಯನ್ನು ಮುರಿದಿದ್ದರು. ಇದೀಗ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರೂ ಇಂಥದ್ದೇ ಒಂದು ದಾಖಲೆಯನ್ನು ನಿರ್ಮಿಸಿದ್ದಾರೆ.
ಯೋಗಿ ಆದಿತ್ಯನಾಥ್ ಅವರು 8 ವರ್ಷ ಮತ್ತು 132 ದಿನಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದು, ಗೋವಿಂದ್ ಬಲ್ಲಭ್ ಪಂತ್ ಅವರ 8 ವರ್ಷ ಮತ್ತು 127 ದಿನಗಳ ಒಟ್ಟು ಅಧಿಕಾರಾವಧಿಯನ್ನು (ಸ್ವಾತಂತ್ರ್ಯ ಪೂರ್ವ ಅವಧಿ ಸೇರಿದಂತೆ) ಮೀರಿದ್ದಾರೆ. ಈ ಮೈಲಿಗಲ್ಲಿನೊಂದಿಗೆ, ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ನಿರಂತರವಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ರಾಜಕೀಯ ಮೈಲಿಗಲ್ಲುಗಳು
ಯೋಗಿ ಆದಿತ್ಯನಾಥ್ ಅವರು ಮಾರ್ಚ್ 19, 2017ರಂದು ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡರು. ಬಳಿಕ, ಸತತ ಎರಡನೇ ಬಾರಿಗೆ ಅಧಿಕಾರಕ್ಕೇರುವ ಮೂಲಕ, ಉತ್ತರ ಪ್ರದೇಶದ ಚುನಾವಣಾ ಇತಿಹಾಸದಲ್ಲಿ ಸಂಪೂರ್ಣ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿ, ಮರು ಆಯ್ಕೆಯಾದ ಮೊದಲ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ತಮ್ಮ ಪರಿಣಾಮಕಾರಿ ಆಡಳಿತ, ನಾಯಕತ್ವ ಹಾಗೂ ವಿರೋಧ ಪಕ್ಷದ ನಾಯಕರ ವಿರುದ್ಧದ ತೀಕ್ಷ್ಣ ಹೇಳಿಕೆಗಳಿಂದ ಅವರು ಸುದ್ದಿಯಲ್ಲಿದ್ದಾರೆ.
ಜೂನ್ 5, 1972ರಂದು ಅಜಯ್ ಮೋಹನ್ ಸಿಂಗ್ ಬಿಷ್ಟ್ ಆಗಿ ಜನಿಸಿದ ಯೋಗಿ ಆದಿತ್ಯನಾಥ್, ತಮ್ಮ 26ನೇ ವಯಸ್ಸಿನಲ್ಲಿ ಸಂಸದರಾಗಿ ಆಯ್ಕೆಯಾದರು ಮತ್ತು ಗೋರಖ್‌ಪುರ ಕ್ಷೇತ್ರವನ್ನು ಲೋಕಸಭೆಯಲ್ಲಿ ಸತತ ಐದು ಬಾರಿ ಪ್ರತಿನಿಧಿಸಿದ್ದರು.



















