ಬೆಂಗಳೂರು | ಕ್ರೆಡಿಟ್ ಕಾರ್ಡ್ ಬಳಕೆ ಈಗ ಹೆಚ್ಚಾಗುತ್ತಿದೆ. ಆನ್ ಲೈನ್ ಶಾಪಿಂಗ್, ಬಿಲ್ ಪಾವತಿ ಹಾಗೂ ದಿನನಿತ್ಯದ ಖರ್ಚುಗಳಿಗೆ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಲಾಗುತ್ತದೆ. ಇದರ ಬೆನ್ನಲ್ಲೇ, ಯೆಸ್ ಬ್ಯಾಂಕ್ ಈಗ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಘೋಷಿಸಿದೆ. ಹೊಸ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಯುಟಿಲಿಟಿ ಬಿಲ್ ಪಾವತಿ, ಸಾರಿಗೆ ವಹಿವಾಟುಗಳು ಮತ್ತು ಡಿಜಿಟಲ್ ವ್ಯಾಲೆಟ್ ಗಳಿಗೆ ಹಣ ಜಮೆ ಮಾಡುವ ಪ್ರಕ್ರಿಯೆ ಮೇಲೆ ಹೊಸ ಬದಲಾಣೆಗಳು ಪರಿಣಾಮ ಬೀರಲಿವೆ ಎಂದು ಬ್ಯಾಂಕ್ ತಿಳಿಸಿದೆ.
ಯುಟಿಲಿಟಿ ಬಿಲ್ ಪಾವತಿ ಮೇಲಿನ ಹೊಸ ನಿಯಮ
ನೀವು ಕ್ರೆಡಿಟ್ ಕಾರ್ಡ್ ಬಳಸಿ ವಿದ್ಯುತ್, ನೀರು, ಗ್ಯಾಸ್ ಅಥವಾ ಇಂಟರ್ನೆಟ್ ನಂತಹ ಬಿಲ್ ಗಳನ್ನು ಪಾವತಿಸಿದರೆ ವಹಿವಾಟು ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್ ನಲ್ಲಿ ‘ಯುಟಿಲಿಟಿ ಸರ್ವಿಸ್ ಟ್ರಾನ್ಸಾಕ್ಷನ್ ಫೀ’ ಎಂಬ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತದೆ. ಬ್ಯಾಂಕ್ ಈ ಖರ್ಚುಗಳ ಮಿತಿಯನ್ನು ಹೆಚ್ಚಿಸಿದ್ದು, ನಿಗದಿತ ಮಿತಿ ದಾಟಿದ ನಂತರವಷ್ಟೇ ಶುಲ್ಕ ಅನ್ವಯವಾಗುತ್ತದೆ.
YES Private ಕ್ರೆಡಿಟ್ ಕಾರ್ಡ್: ಪ್ರೀಮಿಯಂ ವಿಭಾಗದ ಈ ಕಾರ್ಡ್ ನಲ್ಲಿ ಯುಟಿಲಿಟಿ ಖರ್ಚಿನ ಮಿತಿಯನ್ನು 50,000 ರೂ. ಗಳಿಂದ 1 ಲಕ್ಷ ರೂ. ವರೆಗೆ ಹೆಚ್ಚಿಸಲಾಗಿದೆ. ಅಲ್ಲಿಯವರೆಗೆ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ.
MARQUEE ಮತ್ತು RESERV ಕಾರ್ಡ್: ಈ ಕಾರ್ಡ್ ಗಳ ಮಿತಿಯನ್ನು 25,000 ರೂ. ಗಳಿಂದ 50,000 ರೂ. ಗಳಿಗೆ ಹೆಚ್ಚಿಸಲಾಗಿದೆ. ಇತರೆ ರಿಟೇಲ್ ಕ್ರೆಡಿಟ್ ಕಾರ್ಡ್ ಗಳು: ಸಾಮಾನ್ಯ ರಿಟೇಲ್ ಕಾರ್ಡ್ ಗಳಿಗೆ ಈ ಮಿತಿಯನ್ನು 15,000 ರೂ. ಗಳಿಂದ 25,000 ರೂ. ಗಳಿಗೆ ಏರಿಸಲಾಗಿದೆ. ಇದರಿಂದಾಗಿ ಗ್ರಾಹಕರಿಗೆ ಶುಲ್ಕ ಉಳಿಯಲಿದೆ.
ಟೋಲ್ ಮತ್ತು ಸಾರಿಗೆ ವಹಿವಾಟುಗಳು
ಟೋಲ್ ತೆರಿಗೆಗೆ ಸಂಬಂಧಿಸಿದ ಪಾವತಿಗಳು ಇನ್ನುಮುಂದೆ ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್ ನಲ್ಲಿ ‘ಟ್ರಾನ್ಸ್ ಪೋರ್ಟೇಶನ್ ಫೀ’ ಎಂದು ದಾಖಲಾಗುತ್ತವೆ. ಈ ವಹಿವಾಟುಗಳ ಮೇಲೆ ಶೇ. 1ರಷ್ಟು ಶುಲ್ಕದ ಜತೆಗೆ ಜಿಎಸ್ ಟಿ ಕೂಡ ವಿಧಿಸಲಾಗುತ್ತದೆ. ಆದರೆ, ಒಂದು ವಹಿವಾಟಿಗೆ ಗರಿಷ್ಠ 5,000 ರೂ.ಗಳವರೆಗೆ ಮಾತ್ರ ಈ ಶುಲ್ಕವನ್ನು ವಿಧಿಸಲಾಗುತ್ತದೆ.
ಹೊಸ ವ್ಯವಸ್ಥೆಯ ಪ್ರಕಾರ, ಪ್ರೀಮಿಯಂ ಕಾರ್ಡ್ ಗಳಿಗೆ ಮಾಸಿಕ ಖರ್ಚಿನ ಮಿತಿಯನ್ನು 75,000 ರೂ. ನಿಗದಿಪಡಿಸಿದ್ದರೆ, ಇತರೆ ಕಾರ್ಡ್ ಗಳಿಗೆ ಈ ಮಿತಿಯನ್ನು 50,000 ರೂ. ಗಳಿಗೆ ನಿಗದಿಪಡಿಸಲಾಗಿದೆ.
ಡಿಜಿಟಲ್ ವ್ಯಾಲೆಟ್ ಗೆ ಹಣ ಸೇರಿಸಿದರೆ ಶುಲ್ಕ
ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಥರ್ಡ್-ಪಾರ್ಟಿ ಡಿಜಿಟಲ್ ವ್ಯಾಲೆಟ್ ಗಳಿಗೆ (Amazon Pay, Paytm, MobiKwik, Cred ) ಹಣ ಜಮೆ ಮಾಡಿದರೆ ಹೊಸ ನಿಯಮಗಳು ಅನ್ವಯವಾಗಲಿವೆ. 2 ಸಾವಿರ ರೂ.ಗಿಂತ ಹೆಚ್ಚಿನ ಹಣ ಜಮೆ ಮಾಡಿದರೆ ಶೇ.1ರಷ್ಟು ಶುಲ್ಕ ವಿಧಿಸಲಾಗುತ್ತದೆ. ಇಲ್ಲೂ ಕೂಡ ಯಾವುದೇ ಒಂದು ವಹಿವಾಟಿಗೆ ಗರಿಷ್ಠ ಶುಲ್ಕ 5,000 ರೂ.ಗಳಿಗೆ ಸೀಮಿತವಾಗಿರುತ್ತದೆ.
ಇದನ್ನೂ ಓದಿ : ಬೈಕ್ ಅಡ್ಡಗಟ್ಟಿ 31 ಲಕ್ಷ ದೋಚಿದ್ದ ಖತರ್ನಾಕ್ ಕಳ್ಳರ ಬಂಧನ!


















