ಮೈಸೂರು: ಲೇಖಕಿ ಬಾನು ಮುಸ್ತಾಕ್ ಅವರು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ದೀಪ ಬೆಳಗಿ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ಮೈಸೂರು ದಸರಾ-2025 ಅನ್ನು ಉದ್ಘಾಟಿಸಿದರು. ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಮ್ಮುಖದಲ್ಲಿ ಅಧಿಕೃತವಾಗಿ ದಸರಾಗೆ ಬಾನು ಮುಸ್ತಾಕ್ ಅವರು ಚಾಲನೆ ನೀಡಿದ್ದಾರೆ. ಈ ಮೂಲಕ 11 ದಿನಗಳ ಮೈಸೂರು ದಸರಾ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ದೊರಕಿದೆ.
ವಿಶೇಷವಾಗಿ ಹಸಿರು ಕುಪ್ಪಸ, ಹಳದಿ ಸೀರೆಯಲ್ಲಿ ಬಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ನಾಡಹಬ್ಬ ಮೈಸೂರು ದಸರಾ– 2025 ಉದ್ಘಾಟಿಸಿದರು.
ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ಸಚಿವರು, ಜಿಲ್ಲಾಡಳಿತದ ತಂಡದೊಂದಿಗೆ ಬಾನು ಮುಷ್ತಾಕ್ ಪೊಲೀಸ್ ಭದ್ರತೆಯೊಂದಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರು. ಅವರ ಕುಟುಂಬಸ್ಥರು ಪ್ರತ್ಯೇಕ ಬಸ್‌ನಲ್ಲಿ ಆಗಮಿಸಿದ್ದರು.ಸಿಎಂ ಸಿದ್ದರಾಮಯ್ಯ ಸಹಿತ ಸಚಿವರ ತಂಡ ಐರಾವತ ಬಸ್‌ನಲ್ಲಿ ಬಂದ ಬಳಿಕ ಜೊತೆಯಾಗಿ ಉದ್ಘಾಟನಾ ವೇದಿಕೆಯ ಕಡೆ ಸಾಗಿತ್ತು. ಸಚಿವರು, ಸ್ಥಳೀಯ ಶಾಸಕರು ಭಾಗವಹಿಸಿದ್ದರು. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಕುರಿತು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.
“ಚಾಮುಂಡಿ ಬೆಟ್ಟದಲ್ಲಿ ಪೊಲೀಸರಿಂದ ಬಿಗಿ ಭದ್ರತೆ, ತಪಾಸಣೆ”
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಡೆದ ದಸರಾ ಉದ್ಘಾಟನೆಗೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿತ್ತು, ಬೆಟ್ಟದ ಪಾದದಲ್ಲಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ.
ಬೆಟ್ಟಕ್ಕೆ ತೆರಳುವವರನ್ನು ಪರಿಶೀಲನೆ ನಡೆಸಿ, ಪಾಸ್ ಅಥವಾ ಅನುಮತಿ ಪತ್ರ ಇದ್ದವರನ್ನಷ್ಟೇ ಬೆಟ್ಟಕ್ಕೆ ತೆರಳಲು ಅವಕಾಶ ನೀಡಲಾಗುತ್ತಿದೆ. ಪೊಲೀಸ್ ಅಧಿಕಾರಿ ಎಂ.ಮುತ್ತುರಾಜ್ ನೇತೃತ್ವದ ಪೊಲೀಸರ ತಂಡ ಬೆಟ್ಟಕ್ಕೆ ತೆರಳುವವರನ್ನು ತೀವ್ರ ತಪಾಸಣೆಗೊಳಪಡಿಸುತ್ತಿದೆ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಕುರಿತು ಬಿಜೆಪಿ ಹಾಗೂ ಹಿಂದುತ್ವದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರತಿಭಟನೆಯ ಸಮಯದಲ್ಲಿ ‘ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ’ ಎಂಬ ಹೇಳಿಕೆ ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಚಾಮುಂಡಿ ಬೆಟ್ಟಕ್ಕೆ ಹೆಚ್ಚುವರಿ ಭದ್ರತೆ ಒದಗಿಸಿದೆ. ಕ್ಷಿಪ್ರ ಕಾರ್ಯಾಚರಣಾ ಪಡೆಯನ್ನೂ ನಿಯೋಜಿಸಿಲಾಗಿದೆ