ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಮೆಗಾ ಹರಾಜಿಗೂ ಮುನ್ನ, ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರ್ತಿಯರ ಪಟ್ಟಿ ಬಿಡುಗಡೆಯಾಗಿದ್ದು, ಕ್ರಿಕೆಟ್ ಜಗತ್ತಿಗೆ ದೊಡ್ಡ ಆಘಾತ ಎದುರಾಗಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ ಏಕದಿನ ವಿಶ್ವಕಪ್‌ನಲ್ಲಿ ‘ಟೂರ್ನಿಯ ಶ್ರೇಷ್ಠ ಆಟಗಾರ್ತಿ’ ಪ್ರಶಸ್ತಿ ಗೆದ್ದಿದ್ದ, ಭಾರತದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಅವರ ತಂಡ ಯುಪಿ ವಾರಿಯರ್ಸ್ (UP Warriorz) ಕೈಬಿಟ್ಟಿದೆ.
ಯುಪಿ ವಾರಿಯರ್ಸ್ ತಂಡವು ಸಂಪೂರ್ಣವಾಗಿ ಹೊಸ ತಂಡವನ್ನು ಕಟ್ಟುವ ನಿರ್ಧಾರಕ್ಕೆ ಬಂದಿದ್ದು, ಕೇವಲ ಯುವ ಆಟಗಾರ್ತಿ ಶ್ವೇತಾ ಸೆಹ್ರಾವತ್ ಅವರನ್ನು ಮಾತ್ರ ಉಳಿಸಿಕೊಂಡು, ದೀಪ್ತಿ ಶರ್ಮಾ, ನಾಯಕಿ ಅಲಿಸಾ ಹೀಲಿ ಮತ್ತು ಯುವ ವೇಗಿ ಕ್ರಾಂತಿ ಗೌಡ್ ಅವರಂತಹ ಪ್ರಮುಖ ಆಟಗಾರ್ತಿಯರನ್ನು ಹರಾಜಿಗೆ ಬಿಡುಗಡೆ ಮಾಡಿದೆ. ವಿಶ್ವಕಪ್ ಫೈನಲ್‌ನಲ್ಲಿ 5 ವಿಕೆಟ್ ಪಡೆದು, ಅರ್ಧಶತಕ ಸಿಡಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದ ದೀಪ್ತಿ ಶರ್ಮಾ ಅವರನ್ನು ಕೈಬಿಟ್ಟಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಇದೇ ವೇಳೆ, ದೆಹಲಿ ಕ್ಯಾಪಿಟಲ್ಸ್ ತಂಡವು ಆಸ್ಟ್ರೇಲಿಯಾದ ದಿಗ್ಗಜ ಆಟಗಾರ್ತಿ ಮೆಗ್ ಲ್ಯಾನಿಂಗ್ ಅವರನ್ನು ಬಿಡುಗಡೆಗೊಳಿಸಿದೆ. ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್ ಅವರನ್ನೂ ಮುಂಬೈ ಇಂಡಿಯನ್ಸ್ ಕೈಬಿಟ್ಟಿದೆ.
RCBಯಲ್ಲಿ ನಾಲ್ವರಿಗೆ ಸ್ಥಾನ, ಮುಂಬೈ, ದೆಹಲಿಯಲ್ಲಿ ಐವರಿಗೆ
ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು, ತಮ್ಮ ಪ್ರಮುಖ ನಾಲ್ವರು ಆಟಗಾರ್ತಿಯರನ್ನು ಉಳಿಸಿಕೊಂಡಿದೆ. ನಾಯಕಿ ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ ಮತ್ತು ಶ್ರೇಯಾಂಕಾ ಪಾಟೀಲ್ ಅವರು ತಂಡದಲ್ಲೇ ಮುಂದುವರಿಯಲಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವು ವಿಶ್ವಕಪ್ ವಿಜೇತ ನಾಯಕಿ ಹರ್ಮನ್‌ಪ್ರೀತ್ ಕೌರ್, ನ್ಯಾಟ್ ಸಿವರ್-ಬ್ರಂಟ್, ಅಮನ್‌ಜೋತ್ ಕೌರ್, ಜಿ. ಕಾಮಿಲಿನಿ ಮತ್ತು ಹೇಲಿ ಮ್ಯಾಥ್ಯೂಸ್ ಅವರನ್ನು ಉಳಿಸಿಕೊಂಡಿದೆ. ದೆಹಲಿ ಕ್ಯಾಪಿಟಲ್ಸ್ ತಂಡವು ಅನ್ನಾಬೆಲ್ ಸದರ್‌ಲ್ಯಾಂಡ್, ಮರಿಝಾನ್ನೆ ಕಪ್, ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ ಮತ್ತು ನಿಕಿ ಪ್ರಸಾದ್ ಅವರೊಂದಿಗೆ ಮುಂದುವರಿಯಲು ನಿರ್ಧರಿಸಿದೆ.
ಉಳಿಸಿಕೊಂಡ ಆಟಗಾರ್ತಿಯರ ಸಂಪೂರ್ಣ ಪಟ್ಟಿ:
- ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್.
- ಮುಂಬೈ ಇಂಡಿಯನ್ಸ್ (MI): ಹರ್ಮನ್‌ಪ್ರೀತ್ ಕೌರ್, ನ್ಯಾಟ್ ಸಿವರ್-ಬ್ರಂಟ್, ಅಮನ್‌ಜೋತ್ ಕೌರ್, ಜಿ. ಕಾಮಿಲಿನಿ, ಹೇಲಿ ಮ್ಯಾಥ್ಯೂಸ್.
- ದೆಹಲಿ ಕ್ಯಾಪಿಟಲ್ಸ್ (DC): ಅನ್ನಾಬೆಲ್ ಸದರ್‌ಲ್ಯಾಂಡ್, ಮರಿಝಾನ್ನೆ ಕಪ್, ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ನಿಕಿ ಪ್ರಸಾದ್.
- ಗುಜರಾತ್ ಜೈಂಟ್ಸ್ (GG): ಆಶ್ಲೀ ಗಾರ್ಡ್ನರ್, ಬೆತ್ ಮೂನಿ.
- ಯುಪಿ ವಾರಿಯರ್ಸ್ (UPW): ಶ್ವೇತಾ ಸೆಹ್ರಾವತ್.
ಇದನ್ನೂ ಓದಿ:ಮಾರಾಟಕ್ಕಿದೆ ‘ನಮ್ಮ’ RCB: ಮಾ.31, 2026ರೊಳಗೆ ಹೊಸ ಮಾಲೀಕರ ಘೋಷಣೆ



















