ಗುವಾಹಟಿ: 13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ಗೆ ಭಾರತದಲ್ಲಿ ಅದ್ಧೂರಿ ಚಾಲನೆ ಸಿಕ್ಕಿದ್ದು, ಮೈದಾನದಲ್ಲಿ ಭಾರತೀಯ ವನಿತೆಯರ ಆರ್ಭಟದ ಜೊತೆಗೆ, ಡ್ರೆಸ್ಸಿಂಗ್ ರೂಮ್‌ನಲ್ಲಿ ಸಂಗೀತದ ಹೊಳೆಯೇ ಹರಿದಿದೆ. ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅವರು ಶ್ರೀಲಂಕಾ ವಿರುದ್ಧದ ಉದ್ಘಾಟನಾ ಪಂದ್ಯದ ನಂತರ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ಗೆ ಅನಿರೀಕ್ಷಿತ ಭೇಟಿ ನೀಡಿ, ಆಟಗಾರ್ತಿಯರ ಮನೋಬಲವನ್ನು ಹೆಚ್ಚಿಸಿದ್ದಾರೆ.
ತಮ್ಮ ಸುಮಧುರ ಕಂಠದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಮೋಡಿ ಮಾಡಿರುವ ಶ್ರೇಯಾ, ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರ್ತಿಯರೊಂದಿಗೆ ಬೆರೆತು, ‘ಪರಿಣೀತಾ’ ಚಿತ್ರದ ತಮ್ಮ ಜನಪ್ರಿಯ ಗೀತೆ ‘ಪಿಯೂ ಬೋಲೆ’ ಹಾಡನ್ನು ಹಾಡಿದರು. ಈ ವೇಳೆ, ಟೀಮ್ ಇಂಡಿಯಾದ ಆಟಗಾರ್ತಿಯರು ಕೂಡ ಅವರೊಂದಿಗೆ ದನಿಗೂಡಿಸಿ, ಹಾಡಿ ಕುಣಿದು ಸಂಭ್ರಮಿಸಿದರು. ಈ ವಿಶೇಷ ಮತ್ತು ಭಾವನಾತ್ಮಕ ಕ್ಷಣದ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
ಡ್ರೆಸ್ಸಿಂಗ್ ರೂಮ್‌ಗೆ ದಿಢೀರ್ ಭೇಟಿ ನೀಡಿದ ಶ್ರೇಯಾ ಘೋಷಾಲ್ ಅವರನ್ನು ಸ್ಟಾರ್ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಅವರು ತಂಡದ ಉಳಿದ ಆಟಗಾರ್ತಿಯರಿಗೆ ಪರಿಚಯ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೇಯಾ, ತಾನು ಸ್ಟಾರ್ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡರು.
ವಿಶ್ವಕಪ್‌ನ ಉದ್ಘಾಟನಾ ಸಮಾರಂಭದಲ್ಲಿ ಶ್ರೇಯಾ ಘೋಷಾಲ್ ಅವರು ರಾಷ್ಟ್ರಗೀತೆಯನ್ನು ಹಾಡಿದ್ದರು. ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಪಂದ್ಯದಲ್ಲಿ ಭಾರತವು ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿತ್ತು.
“ಪಾಕ್ ವಿರುದ್ಧದ ಪಂದ್ಯದಲ್ಲಿ ಶೇಕ್‌ಹ್ಯಾಂಡ್ ಇಲ್ಲ?”
ಭಾರತ ಮಹಿಳಾ ತಂಡವು ತನ್ನ ಎರಡನೇ ಪಂದ್ಯವನ್ನು ಅಕ್ಟೋಬರ್ 5, ಭಾನುವಾರದಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದೆ. ಈ ಹೈ-ವೋಲ್ಟೇಜ್ ಪಂದ್ಯದಲ್ಲಿ, ಪಾಕಿಸ್ತಾನದ ಆಟಗಾರ್ತಿಯರಿಗೆ ಶೇಕ್‌ಹ್ಯಾಂಡ್ ಮಾಡದಿರಲು ಭಾರತೀಯ ಆಟಗಾರ್ತಿಯರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಕುರಿತು ತಂಡದ ಆಟಗಾರ್ತಿಯರು ಮತ್ತು ನಿರ್ವಹಣಾ ಸಮಿತಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.



















