ಚಂಡೀಗಢ : ಹರಿಯಾಣ ಸರ್ಕಾರದ ಕನಿಷ್ಠ ವೇತನ ಪರಿಷ್ಕರಣೆ ಬೆನ್ನಲ್ಲೇ ಉತ್ತರ ಪ್ರದೇಶದ ನೋಯ್ಡಾದಲ್ಲಿ ಆರಂಭವಾದ ಕಾರ್ಮಿಕರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ವೇತನ ಹೆಚ್ಚಳ ಹಾಗೂ ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಫ್ಯಾಕ್ಟರಿ ಕಾರ್ಮಿಕರು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಸೋಮವಾರ ವಿಕೋಪಕ್ಕೆ ಹೋಗಿದ್ದು, ಪ್ರತಿಭಟನಾಕಾರರು ಪೊಲೀಸ್ ವಾಹನಗಳು ಸೇರಿದಂತೆ ಹಲವು ವಾಹನಗಳನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಿದ್ದಾರೆ.
ನೂರಾರು ಕೈಗಾರಿಕೆಗಳಿರುವ ನೋಯ್ಡಾದ ಹಂತ- 2 ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮುಂಜಾನೆಯ ಜನದಟ್ಟಣೆಯ ಸಮಯದಲ್ಲಿ ನಡೆದ ಈ ಪ್ರತಿಭಟನೆಯಿಂದಾಗಿ ನೋಯ್ಡಾದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಪ್ರತಿಭಟನೆಗೆ ಹರಿಯಾಣ ಮಾದರಿಯೇ ಪ್ರೇರಣೆ :
ಹರಿಯಾಣ ಸರ್ಕಾರವು ಇತ್ತೀಚೆಗಷ್ಟೇ ಕೌಶಲರಹಿತ ಕಾರ್ಮಿಕರ ಕನಿಷ್ಠ ವೇತನವನ್ನು ಶೇ. 35ರಷ್ಟು ಹೆಚ್ಚಿಸಿತ್ತು. ಈ ಮೂಲಕ ಅವರ ಮಾಸಿಕ ವೇತನವನ್ನು 11,274ರೂ.ಗಳಿಂದ 15,220 ರೂ.ಗಳಿಗೆ ಹಾಗೂ ಅರೆ-ಕುಶಲ ಕಾರ್ಮಿಕರ ವೇತನವನ್ನು 12,420 ರೂ.ಗಳಿಂದ 16,780 ರೂ.ಗಳಿಗೆ ಏರಿಕೆ ಮಾಡಿತ್ತು. ಇದೇ ಮಾದರಿಯಲ್ಲಿ ಉತ್ತರ ಪ್ರದೇಶದಲ್ಲೂ ಕನಿಷ್ಠ ವೇತನವನ್ನು ಹೆಚ್ಚಿಸಬೇಕು ಎಂಬುದು ನೋಯ್ಡಾ ಕಾರ್ಮಿಕರ ಪ್ರಮುಖ ಬೇಡಿಕೆಯಾಗಿದೆ.
ಒಂದೇ ರೀತಿಯ ಕೆಲಸಕ್ಕೆ ನೆರೆಯ ರಾಜ್ಯದಲ್ಲಿ ಹೆಚ್ಚಿನ ವೇತನ ಸಿಗುತ್ತಿರುವಾಗ, ಇಲ್ಲಿಯೂ ಸಮಾನ ವೇತನ ನೀಡಬೇಕು ಎಂದು ಕಾರ್ಮಿಕರು ಪಟ್ಟು ಹಿಡಿದಿದ್ದಾರೆ. ಇದರ ಜೊತೆಗೆ ವಾರದ ರಜೆ, ಸುರಕ್ಷಿತ ಕೆಲಸದ ವಾತಾವರಣ ಹಾಗೂ ಕುಂದುಕೊರತೆ ನಿವಾರಣಾ ವ್ಯವಸ್ಥೆಯ ಕೊರತೆಯ ಬಗ್ಗೆಯೂ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೋಷಣೆಯ ವಿರುದ್ಧ ಕಾರ್ಮಿಕರ ಒಕ್ಕೊರಲ ದನಿ
ಬೀದಿಗಿಳಿದಿರುವ ಕಾರ್ಮಿಕರು ಕಂಪನಿಗಳ ಆಡಳಿತ ಮಂಡಳಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. “ನಮಗೆ ಓವರ್‌ಟೈಮ್ ಭತ್ಯೆ ಹಾಗೂ ಕನಿಷ್ಠ 20,000 ರೂ. ಮಾಸಿಕ ವೇತನ ನೀಡಬೇಕು. ಕಂಪನಿಗಳಲ್ಲಿ ನಮ್ಮನ್ನು ಶೋಷಿಸಲಾಗುತ್ತಿದೆ. ಸರಿಯಾದ ಸಮಯಕ್ಕೆ ಊಟವೂ ಸಿಗುವುದಿಲ್ಲ, ಜೊತೆಗೆ ಮಹಿಳೆಯರಿಗೆ ಯಾವುದೇ ಸುರಕ್ಷತೆಯೂ ಇಲ್ಲ,” ಎಂದು ಪ್ರತಿಭಟನಾನಿರತ ಕಾರ್ಮಿಕರಾದ ಲಕ್ಷ್ಮಿ ಆರೋಪಿಸಿದ್ದಾರೆ.
ಮತ್ತೋರ್ವ ಕಾರ್ಮಿಕ ಅಕ್ಷಯ್ ಮಾತನಾಡಿ, “ಗುರುಗ್ರಾಮದಲ್ಲಿ ಕಾರ್ಮಿಕರಿಗೆ 20000 ರೂ. ವೇತನ ನೀಡಲಾಗುತ್ತಿದೆ. ಆದರೆ ನಮಗೆ ಕೇವಲ 10,000 ರೂ. ನೀಡುತ್ತಿದ್ದು, ಅದರಲ್ಲಿಯೂ ಕೆಲವೊಮ್ಮೆ ಕಡಿತ ಮಾಡಲಾಗುತ್ತದೆ,” ಎಂದು ಅಳಲು ತೋಡಿಕೊಂಡಿದ್ದಾರೆ. ಮಹಾನಗರಗಳಲ್ಲಿ ಕೆಲಸ ಮಾಡಿಯೂ ಸಮಾನ ವೇತನ ಸಿಗದಿದ್ದರೆ ಏನು ಪ್ರಯೋಜನ ಎಂದು ಪ್ರಶ್ನಿಸುವ ಕಾರ್ಮಿಕರು, ಹಕ್ಕುಗಳಿಗಾಗಿ ಧ್ವನಿ ಎತ್ತಿದರೆ ಹಿಂಸಾಚಾರದ ಮೂಲಕ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ನಕ್ಸಲಿಸಂ ಮರುಹುಟ್ಟಿನ ಸಂಚು: ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ
ಪ್ರತಿಭಟನೆ ಹಿಂಸಾರೂಪ ಪಡೆಯುತ್ತಿದ್ದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪ್ರತಿಯೊಬ್ಬ ಕಾರ್ಮಿಕನಿಗೂ ಗೌರವಾನ್ವಿತ ವೇತನ ಹಾಗೂ ಸುರಕ್ಷಿತ ವಾತಾವರಣ ಸಿಗಬೇಕು, ಕೈಗಾರಿಕೆಗಳು ಕಾರ್ಮಿಕ ಕಾಯ್ದೆಗಳನ್ನು ಪಾಲಿಸಬೇಕು ಎಂದು ಹೇಳಿರುವ ಅವರು, ಅದೇ ವೇಳೆ ಕಾರ್ಮಿಕರನ್ನು ಪ್ರಚೋದಿಸುತ್ತಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
“ಕಾರ್ಮಿಕರ ಹೆಸರಿನಲ್ಲಿ ಗಲಭೆ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಇದು ಬಹುತೇಕ ಅಂತ್ಯಗೊಂಡಿರುವ ನಕ್ಸಲಿಸಂ ಅನ್ನು ಮರಳಿ ತರುವ ಸಂಚು, ಈ ಬಗ್ಗೆ ಎಚ್ಚರ ವಹಿಸಬೇಕು,” ಎಂದು ಸಿಎಂ ಎಚ್ಚರಿಸಿದ್ದಾರೆ.
ಈ ನಡುವೆ ಪರಿಸ್ಥಿತಿ ತಿಳಿಗೊಳಿಸಲು ನೋಯ್ಡಾ ಪೊಲೀಸರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ ಸಂಯಮ ಕಾಯ್ದುಕೊಳ್ಳುವಂತೆ ಕೋರಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮೇಧಾ ರೂಪಮ್ ಅವರು ಸಹ ಕಾರ್ಮಿಕರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದು, ವದಂತಿಗಳಿಗೆ ಕಿವಿಗೊಡದೆ ತಮ್ಮ ಕರ್ತವ್ಯಗಳಿಗೆ ಮರಳುವಂತೆ ವಿನಂತಿಸಿದ್ದಾರೆ. ತುರ್ತು ಸ್ಪಂದನೆಗಾಗಿ ಕಾರ್ಮಿಕ ಇಲಾಖೆಯ ಸಹಾಯವಾಣಿ ಸಂಖ್ಯೆಗಳನ್ನು ಸಹ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ : ಇಸ್ಲಾಮಾಬಾದ್‌ನಲ್ಲಿ ಅಮೆರಿಕ-ಇರಾನ್ ಶಾಂತಿ ಮಾತುಕತೆ ಕೊನೇ ಕ್ಷಣದಲ್ಲಿ ಮುರಿದುಬಿದ್ದಿದ್ದೇಕೆ?


















