ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರಿಗ ನ್ಯೂಜಿಲ್ಯಾಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯ 300ನೇ ಏಕದಿನ ಪಂದ್ಯವಾಗಿದೆ. ಅವರ ಸಾಧನೆಗೆ ಗೆಳೆಯ ಹಾಗೂ ತಂಡದ ವಿಕೆಟ್ ಕೀಪರ್ ಕೆ.ಎಲ್. ರಾಹುಲ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನೂ ಹಲವಾರು ಪಂದ್ಯಗಳು ಹಾಗೂ ಶತಕಗಳು ಅವರಿಂದ ಮೂಡಲಿವೆ ಎಂದು ವಿಶ್ವಾಸ ಅವರು ವ್ಯಕ್ತಪಡಿಸಿದ್ದಾರೆ.
ಕೊಹ್ಲಿ, ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಮುನ್ನ ಉತ್ತಮ ಫಾರ್ಮ್‌ನಲ್ಲಿರಲಿಲ್ಲ. ಆದರೆ, ಫೆಬ್ರವರಿ 23ರಂದು ದುಬೈನಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಜೇಯ ಶತಕ (100 ರನ್ 111 ಎಸೆತಗಳಲ್ಲಿ) ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಈ ಶತಕ ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿಯ 51ನೇ ಮೂರಂಕಿ ಮೊತ್ತವಾಗಿದೆ. ಇದೇ ಪಂದ್ಯದಲ್ಲಿ ಅವರು 14,000 ಏಕದಿನ ರನ್‌ಗಳನ್ನು ಪೂರ್ಣಗೊಳಿಸಿದ ವೇಗದ ಆಟಗಾರ ಎಂಬ ದಾಖಲೆ ಬರೆದರು. ಈ ದಾಖಲೆಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಕುಮಾರ್ ಸಂಗಕ್ಕಾರ ಅವರನ್ನು ಮೀರಿಸಿದರು.
ಈಗ, ಕೊಹ್ಲಿ ಮತ್ತೊಂದು ಮಹತ್ವದ ಸಾಧನೆಯ ಅಂಚಿನಲ್ಲಿದ್ದಾರೆ. ಮಾರ್ಚ್ 2ರಂದು ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತನ್ನ ಕೊನೆಯ ಗ್ರೂಪ್ ಹಂತದ ಪಂದ್ಯ ಆಡಲಿದ್ದು, ಈ ಪಂದ್ಯ ಕೊಹ್ಲಿಯ 300ನೇ ಏಕದಿನ ಪಂದ್ಯ ಆಗಲಿದೆ. ಈ ಸಾಧನೆ ತಲುಪಿದ ಏಳನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಅವರದ್ದಾಗಲಿದೆ.
ಅವರ ಸಾಧನೆ ಅಪಾರ
ಕೊಹ್ಲಿಯ ಈ ಸಾಧನೆಯನ್ನು ವ್ಯಕ್ತಪಡಿಸಲು ಪದಗಳು ಸಾಲದು. ಅವರು ಭಾರತದ ಕ್ರಿಕೆಟ್‌ಗೆ ನೀಡಿರುವ ಸೇವೆ ಅಪಾರ. ಅವರು ದೊಡ್ಡ ಶತಕ ಬಾರಿಸಿ ಪಾಕಿಸ್ತಾನದ ವಿರುದ್ಧ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ. ಭಾರತದ ಬ್ಯಾಟಿಂಗ್ ಘಟಕ ಉತ್ತಮ ಸ್ಥಿತಿಗೆ ಮರಳಿದಂತಾಗಿದೆ. ಆಸ್ಟ್ರೇಲಿಯಾ ಪ್ರವಾಸದ ವಿಫಲತೆಯ ಬಳಿಕ, ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಶತಕ ಬಾರಿಸಿದ್ದರು. ಶಬ್ಮನ್ ಗಿಲ್ ಚಾಂಪಿಯನ್ಸ್ ಟ್ರೋಫಿಯ ತಮ್ಮ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 101* ರನ್ ಗಳಿಸಿ ಗೆಲುವು ತಂದುಕೊಟ್ಟಿದ್ದರು.
ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದಲ್ಲಿ ಆಕ್ರಮಣಾತ್ಮಕ ಆಟದ ಜೊತೆಗೆ ಸ್ಥಿರತೆ ತಂದುಕೊಡುವ ಮೂಲಕ ಗಮನ ಸೆಳೆದಿದ್ದಾರೆ. ”ಈಗ, ನಮ್ಮ ತಂಡದಲ್ಲಿ ರೋಹಿತ್, ಶಬ್ಮನ್, ಕೊಹ್ಲಿ ಮತ್ತು ಶ್ರೇಯಸ್ ಉತ್ತಮ ಫಾರ್ಮ್‌ನಲ್ಲಿ ಇದ್ದಾರೆ. ಕೊನೆಯ ಪಂದ್ಯದಲ್ಲಿ ಶ್ರೇಯಸ್ 60 ರನ್ ಗಳಿಸಿದರು, ಇಂಗ್ಲೆಂಡ್ ವಿರುದ್ಧವೂ ಉತ್ತಮವಾಗಿ ಆಡಿದರು. ಒಟ್ಟಾರೆ, ನಮ್ಮ ತಂಡ ಅತ್ಯುತ್ತಮ ಸ್ಥಿತಿಯಲ್ಲಿ ಇದೆ. ಕೊಹ್ಲಿ ನಮ್ಮ ತಂಡದ ಅವಿಭಾಜ್ಯ ಅಂಗ,” ಎಂದು ರಾಹುಲ್ ಅಭಿಪ್ರಾಯಪಟ್ಟರು.
”ವಿರಾಟ್ ಮತ್ತು ರೋಹಿತ್ ಮುಂಚೂಣಿಯ ಆಟಗಾರರು. ದೊಡ್ಡ ಪಂದ್ಯಗಳಾಗಿದಾಗ ಅವರನ್ನು ನಂಬಲೇಬೇಕು. ವರ್ಷಗಳಿಂದ ಅವರು ಅದನ್ನು ನಿರ್ವಹಿಸುತ್ತಿದ್ದಾರೆ. ಈ ಹಂತದ ನಂತರವೂ ಕೊಹ್ಲಿ ಇನ್ನಷ್ಟು ಶತಕಗಳನ್ನು ಬಾರಿಸಿ, ಹೆಚ್ಚಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಿ ಎಂದು ನಾನು ಆಶಿಸುತ್ತೇನೆ,” ಎಂದು ಕೆ.ಎಲ್. ರಾಹುಲ್ ಹೇಳಿದರು.