ನವದೆಹಲಿ: ‘ವಂದೇ ಮಾತರಂ’ ಎಂಬ ಪದವು ನಮ್ಮ ವರ್ತಮಾನವನ್ನು ಆತ್ಮವಿಶ್ವಾಸದಿಂದ ತುಂಬುತ್ತದೆ ಮತ್ತು ನಾವು ಯಾವುದೇ ಗುರಿಯನ್ನು ಸಾಧಿಸಬಹುದು ಎಂಬ ಧೈರ್ಯವನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ನ 150ನೇ ವಾರ್ಷಿಕೋತ್ಸವದ ಅಂಗವಾಗಿ ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವರ್ಷವಿಡೀ ನಡೆಯುವ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಸ್ಪೂರ್ತಿ, ಹೊಸ ಶಕ್ತಿ
“ನಾವು ಇಂದು ‘ವಂದೇ ಮಾತರಂ’ನ 150 ವರ್ಷಗಳನ್ನು ಆಚರಿಸುತ್ತಿದ್ದೇವೆ; ಇದು ನಮಗೆ ಹೊಸ ಸ್ಫೂರ್ತಿಯನ್ನು ನೀಡುತ್ತದೆ ಮತ್ತು ದೇಶದ ಜನರಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ,” ಎಂದು ಪ್ರಧಾನಿ ಮೋದಿ ಹೇಳಿದರು. “ಇಂದು, ನವೆಂಬರ್ 7, ಒಂದು ಐತಿಹಾಸಿಕ ದಿನ. ಕೋಟ್ಯಂತರ ಭಾರತೀಯರಲ್ಲಿ ಹೊಸ ಚೈತನ್ಯವನ್ನು ತುಂಬುವ ಈ ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರತಿಯೊಬ್ಬ ನಾಗರಿಕರಿಗೂ ‘ವಂದೇ ಮಾತರಂ’ನ 150ನೇ ವಾರ್ಷಿಕೋತ್ಸವದ ಶುಭಾಶಯಗಳು,” ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಧಾನಿಯವರು ‘ವಂದೇ ಮಾತರಂ’ನ 150ನೇ ವರ್ಷಾಚರಣೆಯ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು. ಅಲ್ಲದೆ, ಇದೇ ವಿಷಯಕ್ಕೆ ಸಂಬಂಧಿಸಿದ ಪೋರ್ಟಲ್‌ಗೆ ಚಾಲನೆ ನೀಡಿದರು. “ತಲೆಮಾರುಗಳಿಗೆ ಸ್ಫೂರ್ತಿ ನೀಡಿದ ಮತ್ತು ನಮ್ಮ ರಾಷ್ಟ್ರದಾದ್ಯಂತ ದೇಶಭಕ್ತಿಯ ಅಳಿಸಲಾಗದ ಕಿಚ್ಚನ್ನು ಹೊತ್ತಿಸಿದ ‘ವಂದೇ ಮಾತರಂ’ನ 150 ವೈಭವದ ವರ್ಷಗಳನ್ನು ನಾವು ಆಚರಿಸುತ್ತಿದ್ದೇವೆ,” ಎಂದು ಪ್ರಧಾನಿ ಮೋದಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವರ್ಷವಿಡೀ ಆಚರಣೆ
ಈ ಕಾರ್ಯಕ್ರಮವು ನವೆಂಬರ್ 7, 2025 ರಿಂದ ನವೆಂಬರ್ 7, 2026 ರವರೆಗೆ ಒಂದು ವರ್ಷದ ರಾಷ್ಟ್ರವ್ಯಾಪಿ ಸಂಸ್ಮರಣೆಗೆ ಔಪಚಾರಿಕ ಚಾಲನೆ ನೀಡಿದೆ. ಭಾರತದ ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ ನೀಡಿದ ಮತ್ತು ಇಂದಿಗೂ ರಾಷ್ಟ್ರೀಯ ಹೆಮ್ಮೆ ಹಾಗೂ ಏಕತೆಯನ್ನು ಪ್ರೇರೇಪಿಸುವ ಈ ಕಾಲಾತೀತ ಸಂಯೋಜನೆಯ 150 ವರ್ಷಗಳನ್ನು ಈ ಆಚರಣೆಯು ಗುರುತಿಸುತ್ತದೆ.
‘ವಂದೇ ಮಾತರಂ’ ಇತಿಹಾಸ
ಈ ವರ್ಷಕ್ಕೆ ‘ವಂದೇ ಮಾತರಂ’ ರಚನೆಯಾಗಿ 150 ವರ್ಷಗಳು ಪೂರ್ಣಗೊಂಡಿವೆ. ಈ ಗೀತೆಯನ್ನು ಬಂಕಿಮಚಂದ್ರ ಚಟರ್ಜಿ ಅವರು 1875ರ ನವೆಂಬರ್ 7ರಂದು, ಅಕ್ಷಯ ನವಮಿಯ ಶುಭ ದಿನದಂದು ರಚಿಸಿದ್ದರು. ‘ವಂದೇ ಮಾತರಂ’ ಗೀತೆಯು ಮೊದಲು ಚಟರ್ಜಿ ಅವರ “ಆನಂದಮಠ” ಕಾದಂಬರಿಯ ಭಾಗವಾಗಿ “ಬಂಗದರ್ಶನ” ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಯಿತು. ತಾಯ್ನಾಡನ್ನು ಶಕ್ತಿ, ಸಮೃದ್ಧಿ ಮತ್ತು ದೈವತ್ವದ ಮೂರ್ತರೂಪವೆಂದು ಕರೆಯುವ ಈ ಹಾಡು, ಭಾರತದ ಜಾಗೃತಗೊಳ್ಳುತ್ತಿರುವ ಏಕತೆ ಮತ್ತು ಸ್ವಾಭಿಮಾನದ ಮನೋಭಾವಕ್ಕೆ ಕಾವ್ಯಾತ್ಮಕ ಅಭಿವ್ಯಕ್ತಿ ನೀಡಿತು. ಶೀಘ್ರದಲ್ಲೇ ಇದು ರಾಷ್ಟ್ರಕ್ಕೆ ಭಕ್ತಿಯ ಶಾಶ್ವತ ಸಂಕೇತವಾಗಿ ಮಾರ್ಪಟ್ಟಿತು.
ಇದನ್ನೂ ಓದಿ:‘ ವಂದೇ ಮಾತರಂ’ನಿಂದ ದುರ್ಗೆಯ ಶ್ಲೋಕಗಳನ್ನು ನೆಹರೂ ಉದ್ದೇಶಪೂರ್ವಕವಾಗಿ ತೆಗೆದುಹಾಕಿದ್ದರು : ಬಿಜೆಪಿ ಗಂಭೀರ ಆರೋಪ



















