ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಕಾಯಿಲೆಗಳು ಬಹಳ ಬೇಗ ಆವರಿಸಿಕೊಳ್ಳುತ್ತವೆ. ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಆರೋಗ್ಯವನ್ನು ನಾವು ಕೂಡ ಹಾಳು ಮಾಡಿಕೊಳ್ಳುತ್ತೇವೆ. ಇದೀಗ, ಬಹುತೇಕ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. 30 ವರ್ಷ ದಾಟಿದ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇದು ಭಯಾನಕ ರೋಗವಲ್ಲದಿದ್ದರೂ ನಿರ್ಲಕ್ಷ್ಯಿಸಿದರೆ ಕಷ್ಟ ಎಂದು ವೈದ್ಯರು ಹೇಳುತ್ತಿದ್ದಾರೆ. ಥೈರಾಯ್ಡ್ ಆಲಸ್ಯ ಮತ್ತು ಚೈತನ್ಯದ ಮಟ್ಟ ಕಡಿಮೆ ಅನಿಸಿದರೆ, ಥೈರಾಯ್ಡ್ ಇದೆ ಎಂದರ್ಥ. ಅಲ್ಲದೇ, ಋತು ಚಕ್ರದ ಸಮಸ್ಯೆಗಳು ಕಂಡು ಬರುತ್ತವೆ. ಲೈಟ್ ಆಗಿ ಶೀತ ಕೂಡ ಆಗುತ್ತೆ. ನಮ್ಮ ದೇಹದಲ್ಲಿ ತೂಕ ಕೂಡ ಹೆಚ್ಚಾಗುತ್ತೆ. ಇಷ್ಟೆಲ್ಲಾ ಲಕ್ಷಣಗಳು ನಿಮಗೆ ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕಿದೆ.
ಥೈರಾಯ್ಡ್ ಸಮಸ್ಯೆ ಇದ್ದರೆ ಕೆಲವರು ದಪ್ಪವಾಗುತ್ತಾರೆ. ಕೆಲವರು ಸಣ್ಣ ಆಗುತ್ತಾ ಹೋಗುತ್ತಾರೆ. ಹಲವಾರು ಸಮಸ್ಯೆಗಳಿಗೆ ಕಾರಣವಾಗಿರುವ ಇಂದಿನ ಜಡ ಜೀವನ ಶೈಲಿ ಮತ್ತು ಆಹಾರ ಕ್ರಮದ ಬದಲಾವಣೆಗಳೇ ಈ ಸಮಸ್ಯೆಯ ಮೂಲವಾಗಿದೆ. ಇದಲ್ಲದೇ ಸಾಮಾನ್ಯವಾಗಿ ಮಾನಸಿಕ ಒತ್ತಡ, ವ್ಯಾಯಾಮ ಅಥವಾ ಯಾವುದೇ ಬಗೆಯ ದೈಹಿಕ ಚಟುವಟಿಕೆಗಳು ಇಲ್ಲದಿರುವುದು ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ.
ಈ ರೀತಿಯ ಕಾಯಿಲೆ ಇದ್ದವರು ಪ್ರತಿ ದಿನ ಸೇಬು, ದಾಳಿಂಬೆ, ಸೀಬೆ, ಬಾಳೆಹಣ್ಣು, ಕಿತ್ತಲೆ ಹೀಗೆ ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅಂದರೆ ಮಜ್ಜಿಗೆ, ಮೊಸರು ಮತ್ತು ತುಪ್ಪವನ್ನು ನಿಯಮಿತವಾಗಿ ಹಿತಮಿತವಾಗಿ ಸೇವಿಸಬೇಕು. ಅಯೋಡಿನ್ ಇರುವ ಉಪ್ಪನ್ನು ದಿನನಿತ್ಯ ಬಳಸಬೇಕು. ಏಕೆಂದರೆ ಅಯೋಡಿನ್ ಥೈರಾಯ್ಡ್ ಗ್ರಂಥಿಗೆ ಅಗತ್ಯವಾದ ಮೂಲ ಖನಿಜವಾಗಿದೆ. ಹಾಗೆಯೇ ಸತುವಿನ ಸಮೃದ್ಧ ಮೂಲವಾಗಿರುವ ಕುಂಬಳಕಾಯಿ ಬೀಜಗಳು, ಕರಿಬೇವಿನ ಸೊಪ್ಪು, ಹೆಸರುಬೇಳೆ ಮತ್ತು ಮೊಳಕೆ ಬರಿಸಿದ ಹೆಸರುಕಾಳು, ಕಡಲೆಕಾಳು, ಹುರುಳಿಕಾಳಿನ ಸೇವನೆ ಹಿತಕಾರಿ.