ಮುಂಬೈ : ತನ್ನನ್ನು ತಾನು ದೇವರ ಅವತಾರ ಎಂದು ಬಿಂಬಿಸಿಕೊಂಡು, ಅಮಾಯಕ ಮಹಿಳೆಯರನ್ನು ವಂಚಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ತಾನೇ ಸಾಕ್ಷಾತ್ ಪರಶಿವನ ಅವತಾರ ಎಂದು ನಂಬಿಸಿ, 35 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಪಾಲ್ಘರ್ ಜಿಲ್ಲೆಯ 40 ವರ್ಷದ ರಿಷಿಕೇಶ್ ವೈದ್ಯ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
2023ರಲ್ಲಿ ಫೇಸ್‌ಬುಕ್ ಮೂಲಕ ಪುಣೆ ಮೂಲದ ಸಂತ್ರಸ್ತ ಮಹಿಳೆಗೆ ಆರೋಪಿ ರಿಷಿಕೇಶ್ ವೈದ್ಯನ ಪರಿಚಯವಾಗಿತ್ತು. ಇದೇ ಪರಿಚಯದ ಆಧಾರದ ಮೇಲೆ ಅದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ಆಕೆಯನ್ನು ಭೇಟಿಯಾಗಲು ಆರೋಪಿಯು ಪುಣೆಗೆ ಆಗಮಿಸಿದ್ದ. ಭೇಟಿಯ ವೇಳೆ ತಾನು ಮಹಾದೇವನ (ಶಿವ) ಅವತಾರವೆಂದು ಆಕೆಯನ್ನು ನಂಬಿಸಿದ್ದಲ್ಲದೆ, ಆಕೆಯೇ ತನ್ನ ‘ಪಾರ್ವತಿ’ ಎಂದು ಹೇಳಿ ಮಂಕುಬೂದಿ ಎರಚಿದ್ದ. ಇದೇ ಭ್ರಮೆಯಲ್ಲಿ ಆಕೆಯನ್ನು ಪುಣೆಯ ಮಂಜರಿ ಪ್ರದೇಶದ ಲಾಡ್ಜ್‌ವೊಂದಕ್ಕೆ ಕರೆದೊಯ್ದು, ಆಕೆಗೆ ಪ್ರಜ್ಞೆ ತಪ್ಪುವ ಔಷಧ ನೀಡಿ ಅತ್ಯಾಚಾರವೆಸಗಿದ್ದಾನೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಅಶ್ಲೀಲ ಫೋಟೋಗಳ ಮೂಲಕ ಬ್ಲ್ಯಾಕ್‌ಮೇಲ್
ಅತ್ಯಾಚಾರವೆಸಗುವ ವೇಳೆ ಆರೋಪಿಯು ಮಹಿಳೆಗೆ ಅರಿವಿಲ್ಲದಂತೆ ಆಕೆಯ ಬೆತ್ತಲೆ ಫೋಟೋಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದುಕೊಂಡಿದ್ದ. ಪಾಲ್ಘರ್ ಜಿಲ್ಲೆಯಲ್ಲಿ ಸಾಮಾಜಿಕ ಸಂಸ್ಥೆಯೊಂದನ್ನು ನಡೆಸುತ್ತಿರುವ ಈತ, ತಾನು ತೆಗೆದಿದ್ದ ಫೋಟೋಗಳನ್ನು ಮುಂದಿಟ್ಟುಕೊಂಡು ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದ್ದ. ಇದನ್ನು ತೋರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಾ ಕಳೆದ ವರ್ಷದ ಮೇ ತಿಂಗಳಲ್ಲಿ ಮತ್ತೆ ವಸಾಯಿಯ ಹೋಟೆಲ್‌ವೊಂದಕ್ಕೆ ಆಕೆಯನ್ನು ಕರೆಸಿಕೊಂಡು, ಮತ್ತೊಮ್ಮೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ದೂರು ನೀಡಲು ಧೈರ್ಯ ತುಂಬಿದ ಮತ್ತೊಂದು ಪ್ರಕರಣ
ಇತ್ತೀಚೆಗಷ್ಟೇ ನಾಸಿಕ್‌ನಲ್ಲಿ ಮರ್ಚೆಂಟ್ ನೇವಿಯ ಮಾಜಿ ಅಧಿಕಾರಿ ಹಾಗೂ ತನ್ನನ್ನು ತಾನು ದೇವಮಾನವ ಎಂದು ಕರೆದುಕೊಳ್ಳುತ್ತಿದ್ದ ‘ಕ್ಯಾಪ್ಟನ್’ ಅಶೋಕ್ ಖರಾತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ, ಇದುವರೆಗೂ ಭಯದಿಂದ ಮೌನವಾಗಿದ್ದ ಸಂತ್ರಸ್ತೆಗೆ ತನಗೆ ನ್ಯಾಯ ಒದಗಿಸಿಕೊಳ್ಳುವ ಧೈರ್ಯ ಬಂದಿದೆ. ಅಶೋಕ್ ಖರಾತ್ ಬಂಧನದಿಂದ ಪ್ರೇರಿತಳಾದ ಮಹಿಳೆಯು, ಮಾಣಿಕ್ಪುರ ಪೊಲೀಸ್ ಠಾಣೆಯ ಮೆಟ್ಟಿಲೇರಿ ತನ್ನ ಮೇಲಾದ ದೌರ್ಜನ್ಯದ ವಿರುದ್ಧ ದೂರು ದಾಖಲಿಸಿದ್ದಾರೆ.
ಝೀರೋ ಎಫ್‌ಐಆರ್ ದಾಖಲು: ಆರೋಪಿಗಾಗಿ ಶೋಧ
ಅತ್ಯಾಚಾರದ ಮೂಲ ಘಟನೆಯು ಪುಣೆಯಲ್ಲಿ ನಡೆದಿರುವುದರಿಂದ ಬುಧವಾರ ‘ಝೀರೋ ಎಫ್‌ಐಆರ್’ (ಯಾವುದೇ ಪೊಲೀಸ್ ಠಾಣೆಯ ವ್ಯಾಪ್ತಿಯ ಮಿತಿಯಿಲ್ಲದೆ ದಾಖಲಿಸುವ ಪ್ರಥಮ ವರ್ತಮಾನ ವರದಿ) ದಾಖಲಿಸಿಕೊಳ್ಳಲಾಗಿದೆ ಎಂದು ಮಾಣಿಕ್ಪುರ ಪೊಲೀಸ್ ಠಾಣೆಯ ಹಿರಿಯ ನಿರೀಕ್ಷಕ ಹೀರಾಲಾಲ್ ಜಾಧವ್ ಹೇಳಿದ್ದಾರೆ. ಬಳಿಕ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಪುಣೆಯ ಹಡಪ್ಸರ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಆರೋಪಿ ರಿಷಿಕೇಶ್ ವೈದ್ಯ ಇದೇ ಮಾದರಿಯಲ್ಲಿ ಇನ್ನೂ ಹಲವು ಮಹಿಳೆಯರನ್ನು ವಂಚಿಸಿ, ಲೈಂಗಿಕವಾಗಿ ಬಳಸಿಕೊಂಡಿರುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ಶಂಕಿಸಲಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಪಲ್ಟಿ- ಮಕ್ಕಳು ಸೇರಿ 9 ಜನರಿಗೆ ಗಂಭೀರ ಗಾಯ!



















