ಮುಂಬೈ: ದೇಶದಲ್ಲಿ ಮಹಿಳಾ ಸುರಕ್ಷತೆ ಎಂಬುದು ಶತಮಾನಗಳಿಂದಲೂ ಮರೀಚಿಕೆಯೇ ಆಗಿದೆ. ದಿನ ಬೆಳಗಾದರೆ ಮಹಿಳೆ ಮೇಲೆ ಅತ್ಯಾಚಾರ, ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಂಬಂತಹ ಸುದ್ದಿಗಳು ಕಣ್ಣಿಗೆ ರಾಚುತ್ತಲೇ ಇರುತ್ತವೆ. ಎಷ್ಟೇ ಕಠಿಣ ಕಾನೂನು ಜಾರಿಗೆ ತಂದರೂ, ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಿದರೂ ಹೆಣ್ಣುಮಕ್ಕಳಿಗೆ ರಕ್ಷಣೆ ಎಂಬುದೇ ಇಲ್ಲದಂತಾಗಿದೆ. ಇದಕ್ಕೆ ನಿದರ್ಶನ ಎಂಬಂತೆ ಮಹಾರಾಷ್ಟ್ರದ ಪುಣೆಯಲ್ಲಿ ಪೊಲೀಸ್ ಠಾಣೆ ಬಳಿಯೇ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿದೆ.
ಹೌದು, ಪುಣೆಯ ಸ್ವಾರ್ ಗೇಟ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ನಲ್ಲಿಯೇ 26 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ. ಪೊಲೀಸ್ ಠಾಣೆಯಿಂದ ಕೇವಲ ನೂರು ಮೀಟರ್ ದೂರದಲ್ಲಿರುವ ಬಸ್ ನಿಲ್ದಾಣದಲ್ಲಿ ಅತ್ಯಾಚಾರ ನಡೆದಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಹಿಳೆಯು ಕಳೆದ ಮಂಗಳವಾರ ಸತಾರ ಜಿಲ್ಲೆಯ ಫುಲ್ತಾನ್ ಎಂಬ ಗ್ರಾಮಕ್ಕೆ ತೆರಳಲು ಬಸ್ ನಿಲ್ದಾಣಕ್ಕೆ ತೆರಳಿದ್ದರು. ಬೆಳಗಿನ ಜಾವ 5.30ರ ಸುಮಾರಿಗೆ ಬಸ್ ನಿಲ್ದಾಣದಲ್ಲಿದ್ದರು. ಇದೇ ವೇಳೆ ದುಷ್ಕರ್ಮಿಯೊಬ್ಬ ಮಹಿಳೆಯನ್ನು ಹೊತ್ತುಕೊಂಡು ಹೋಗಿ, ಬಸ್ ನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅತ್ಯಾಚಾರ ಎಸಗಿದ ಅರೋಪಿಯನ್ನು ದತ್ತಾತ್ರೇಯ ರಾಮದಾಸ್ ಎಂದು ಗುರುತಿಸಲಾಗಿದೆ. ಆದರೆ ಪೊಲೀಸರಿಗೆ ಇದುವರೆಗೆ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿಲ್ಲ. ಈತನ ಬಂಧನಕ್ಕಾಗಿ ಎಂಟು ತಂಡಗಳನ್ನು ಕೂಡ ರಚಿಸಲಾಗಿದೆ.