ಚಾಮರಾಜನಗರ: ಜಿಲ್ಲೆಯಲ್ಲಿ ಮತ್ತೊಂದು ಹುಲಿ ದಾಳಿಯ ಪ್ರಕರಣ ಬೆಳಕಿಗೆ ಬಂದಿದೆ. ಹುಲಿ ದಾಳಿಗೆ ಮಹಿಳೆ ಬಲಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಕಾಲೋನಿಯಲ್ಲಿ ನಡೆದಿದೆ. ದೇಶಿಪುರ ಕಾಲೊನಿಯ ಪುಟ್ಟಮ್ಮ ಎಂಬ ಮಹಿಳೆ ಬಲಿಯಾದವರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಾಲೋನಿ ಸಮೀಪ ಕುರಿಗಳನ್ನು ಮೇಯಿಸುವಾಗ ಹುಲಿಯೊಂದು ಏಕಾಏಕಿ ದಾಳಿ ನಡೆಸಿದ್ದು, ಕುತ್ತಿಗೆ, ಎದೆಭಾಗ, ಹೊಟ್ಟೆ ಭಾಗ ಕಚ್ಚಿ ಕೊಂದಿದೆ. ನಂತರ, ಮಹಿಳೆಯನ್ನು ಅರಣ್ಯದೊಳಗೆ ಎಳೆದೊಯ್ದಿತ್ತು ಎನ್ನಲಾಗಿದೆ.
ಕುರಿಗಾಹಿ ಮಹಿಳೆಯನ್ನು ಎಳೆದೊಯ್ದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹುಡುಕಾಡಿದಾಗ ಪುಟ್ಟಮ್ಮನ ಶವ ಸಿಕ್ಕಿದೆ. ಜೂನ್ 10ರಂದು ತಾಲೂಕಿನ ಬೇಡಗುಳಿಯಲ್ಲಿ ಬಹಿರ್ದೆಸೆಗೆ ತೆರಳಿದ್ದ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿತ್ತು. ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ.