ಹುಬ್ಬಳ್ಳಿ: ನಗರದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ವಿಡಿಯೋ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾಮುಕರನ್ನು ಸ್ಥಳೀಯರು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ಜ.9 ರಂದು ಅಂಬೇಡ್ಕರ್ ಮೈದಾನದಿಂದ ಮಹಿಳೆಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿದ್ದರು. ಬಳಿಕ ಮಹಿಳೆಗೆ ಮದ್ಯ ಕುಡಿಸಿ ಅನುಚಿತವಾಗಿ ವರ್ತಿಸಿದ್ದರು. ಅದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಘಟನೆಯಾದ ಒಂದು ದಿನದ ನಂತರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ಆರೋಪಿಗಳಾದ ಶಿವಾನಂದ್ ಹಾಗೂ ಗಣೇಶ್‍ನನ್ನು ಸ್ಥಳೀಯರು ಹಿಡಿದು ತಲೆ ಬೋಳಿಸಿ ಥಳಿಸಿ, ಪೊಲೀಸರಿಗೊಪ್ಪಿಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೇ ಥಳಿಸಿದ ನಾಲ್ವರ ವಿರುದ್ಧ ದೂರು ದಾಖಲಾಗಿದ್ದು, ಅವರನ್ನೂ ಬಂಧಿಸಲಾಗಿದೆ.
ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದ ನಾಲ್ವರ ವಿರುದ್ಧ ದೂರು ದಾಖಲಾಗಿರೋದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಹುಬ್ಬಳ್ಳಿ ನಗರದ ಶಿವಶಂಕರ ಕಾಲೋನಿಯ ನಾಲ್ವರ ವಿರುದ್ಧ ಪ್ರಕರಣ ಖಂಡಿಸಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಬಳಿ ಸ್ಥಳೀಯರು ಕಿಡಿಕಾರಿದ್ದಾರೆ. ಆರೋಪಿಗಳನ್ನು ಹಿಡಿದು ಕೊಟ್ಟವರ ವಿರುದ್ಧ ಕೇಸ್ ಹಾಕಲಾಗಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಪೊಲೀಸರು ಈ ರೀತಿ ಕೇಸ್ ಹಾಕಿದರೆ, ಅತ್ಯಾಚಾರ ನಡೆದರು ಯಾರು ರಕ್ಷಣೆಗೆ ಬರಲ್ಲಾ ಎಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಪರಶುರಾಮ ಥೀಮ್ ಪಾರ್ಕ್ನ ತಾಮ್ರ ಹೊದಿಕೆ ಕದ್ದ ಕಳ್ಳರು ಸೆರೆ



















