ಬೀಜಿಂಗ್ : 82 ವರ್ಷದ ಮಹಿಳೆಯೊಬ್ಬರು ತಮ್ಮ ಬೆನ್ನು ನೋವನ್ನು ಗುಣಪಡಿಸಿಕೊಳ್ಳಲು ಸ್ಥಳೀಯ ಜಾನಪದ ಔಷಧಿಯೆಂದು ನಂಬಿ 8 ಜೀವಂತ ಕಪ್ಪೆಗಳನ್ನು ನುಂಗಿದ ಆಘಾತಕಾರಿ ಘಟನೆ ಪೂರ್ವ ಚೀನಾದಲ್ಲಿ ನಡೆದಿದೆ. ಈ ಅವೈಜ್ಞಾನಿಕ ಪ್ರಯತ್ನದ ಪರಿಣಾಮವೆಂಬಂತೆ ಅವರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಝೆಜಿಯಾಂಗ್ ಪ್ರಾಂತ್ಯದ ಹ್ಯಾಂಗ್‌ಝೌ ನಗರದ ನಿವಾಸಿಯಾದ ಝಾಂಗ್ ಎಂಬ ಮಹಿಳೆ, ಹರ್ನಿಯೇಟೆಡ್ ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿದ್ದರು. ಜೀವಂತ ಕಪ್ಪೆಗಳನ್ನು ತಿಂದರೆ ನೋವು ಕಡಿಮೆಯಾಗುತ್ತದೆ ಎಂಬ ಜಾನಪದ ನಂಬಿಕೆಯನ್ನು ಅನುಸರಿಸಿ ಅವರು ತಮ್ಮ ಕುಟುಂಬದ ಸದಸ್ಯರಿಗೆ ಸಣ್ಣ ಕಪ್ಪೆಗಳನ್ನು ಹಿಡಿದು ತರಲು ಹೇಳಿದ್ದಾರೆ. ಮೊದಲ ದಿನ ಮೂರು ಮತ್ತು ಮರುದಿನ ಐದು ಕಪ್ಪೆಗಳನ್ನು ಜೀವಂತವಾಗಿ ನುಂಗಿದ್ದಾರೆ.
ಆರೋಗ್ಯದ ಮೇಲೆ ಪರಿಣಾಮ : ಕಪ್ಪೆಗಳನ್ನು ನುಂಗಿದ ನಂತರ, ಝಾಂಗ್ ಅವರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡು ನಡೆಯಲು ಅಸಾಧ್ಯವಾದಾಗ, ಅವರ ಕುಟುಂಬದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆಗಳ ನಂತರ, ಅವರ ದೇಹದಲ್ಲಿ ಪರೋಪಜೀವಿ ಸೋಂಕು ಇರುವುದು ಪತ್ತೆಯಾಗಿದೆ. ಜೀವಂತ ಕಪ್ಪೆಗಳನ್ನು ನುಂಗಿದ್ದರಿಂದ ಅವರ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗಿ, ‘ಸ್ಪಾರ್ಗಾನಮ್’ ಎಂಬ ಪರೋಪಜೀವಿಗಳು ದೇಹವನ್ನು ಪ್ರವೇಶಿಸಿವೆ ಎಂದು ವೈದ್ಯರು ತಿಳಿಸಿದ್ದಾರೆ.
ವೈದ್ಯರ ಎಚ್ಚರಿಕೆ : ಇಂತಹ ಪ್ರಕರಣಗಳು ಅಪರೂಪವೇನಲ್ಲ ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಹಾವು ಅಥವಾ ಮೀನಿನ ಪಿತ್ತಕೋಶವನ್ನು ಹಸಿಯಾಗಿ ತಿನ್ನುವುದು ಅಥವಾ ಕಪ್ಪೆಯ ಚರ್ಮವನ್ನು ದೇಹಕ್ಕೆ ಹಚ್ಚಿಕೊಳ್ಳುವಂತಹ ಅನೇಕ ಪ್ರಕರಣಗಳನ್ನು ತಾವು ನೋಡಿದ್ದಾಗಿ ತಿಳಿಸಿದ್ದಾರೆ. ಇಂತಹ ಅವೈಜ್ಞಾನಿಕ ಜಾನಪದ ಪದ್ಧತಿಗಳು ಯಾವುದೇ ವೈದ್ಯಕೀಯ ಆಧಾರವನ್ನು ಹೊಂದಿಲ್ಲ, ಬದಲಾಗಿ, ಇವುಗಳಿಂದ ಪರೋಪಜೀವಿಗಳು ದೇಹವನ್ನು ಪ್ರವೇಶಿಸಿ ದೃಷ್ಟಿ ದೋಷ, ಮೆದುಳಿನ ಸೋಂಕು ಮತ್ತು ಕೆಲವೊಮ್ಮೆ ಪ್ರಾಣಾಪಾಯಕ್ಕೂ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.