ಪುಣೆ: ಪತಿಯ ಜೀವ ಉಳಿಸಲೆಂದು ಪತ್ನಿಯು ತಮ್ಮ ಯಕೃತ್ತಿನ ಒಂದು ಭಾಗವನ್ನೇ ದಾನ ಮಾಡಿದ್ದರು. ಆದರೆ, ಶಸ್ತ್ರಚಿಕಿತ್ಸೆಯಾದ ಕೆಲವೇ ದಿನಗಳಲ್ಲಿ ಪತಿ-ಪತ್ನಿಯಿಬ್ಬರೂ ಸಾವನ್ನಪ್ಪಿರುವ ಮನಕಲಕುವ ಘಟನೆ ಪುಣೆಯಲ್ಲಿ ನಡೆದಿದೆ. ಈ ದುರಂತವು ವೈದ್ಯಕೀಯ ನಿರ್ಲಕ್ಷ್ಯದ ಆರೋಪಕ್ಕೆ ಕಾರಣವಾಗಿದ್ದು, ಮಹಾರಾಷ್ಟ್ರ ಆರೋಗ್ಯ ಇಲಾಖೆಯು ಸಂಬಂಧಪಟ್ಟ ಖಾಸಗಿ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದೆ.
ಮೃತರನ್ನು ಬಾಪು ಕೊಮ್ಕರ್ ಮತ್ತು ಅವರ ಪತ್ನಿ ಕಾಮಿನಿ ಕೊಮ್ಕರ್ ಎಂದು ಗುರುತಿಸಲಾಗಿದೆ. ಆಗಸ್ಟ್ 15 ರಂದು ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ದಂಪತಿಗೆ ಯಕೃತ್ತು ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
ಶಸ್ತ್ರಚಿಕಿತ್ಸೆಯ ನಂತರ ಬಾಪು ಕೊಮ್ಕರ್ ಅವರ ಆರೋಗ್ಯ ಹದಗೆಟ್ಟು, ಆಗಸ್ಟ್ 17 ರಂದು ಅವರು ಮೃತಪಟ್ಟರು. ಇದರ ಆಘಾತದಿಂದ ಹೊರಬರುವ ಮುನ್ನವೇ, ಆಗಸ್ಟ್ 21ರಂದು ಕಾಮಿನಿ ಅವರಿಗೂ ತೀವ್ರ ಸೋಂಕು ಉಂಟಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ವೈದ್ಯರ ವಿರುದ್ಧ ಆಕ್ರೋಶ:
ದಂಪತಿಯ ದಿಢೀರ್ ಸಾವಿನಿಂದ ಆಘಾತಕ್ಕೊಳಗಾದ ಕುಟುಂಬ ಸದಸ್ಯರು ಆಸ್ಪತ್ರೆಯ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯದ ಗಂಭೀರ ಆರೋಪ ಮಾಡಿದ್ದು, ಈ ಸಾವುಗಳ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಆರೋಗ್ಯ ಇಲಾಖೆ ತನಿಖೆಗೆ ಮುಂದಾಗಿದೆ. “ನಾವು ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದ್ದು, ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ರೋಗಿ ಮತ್ತು ದಾನಿಯ ವಿವರಗಳು, ವಿಡಿಯೋ ರೆಕಾರ್ಡಿಂಗ್ ಹಾಗೂ ಚಿಕಿತ್ಸಾ ಕ್ರಮದ ಸಂಪೂರ್ಣ ವರದಿಯನ್ನು ಸೋಮವಾರದೊಳಗೆ ಸಲ್ಲಿಸುವಂತೆ ಸೂಚಿಸಿದ್ದೇವೆ,” ಎಂದು ಆರೋಗ್ಯ ಸೇವೆಗಳ ಉಪನಿರ್ದೇಶಕ ಡಾ. ನಾಗನಾಥ್ ಯಂಪಲ್ಲೆ ತಿಳಿಸಿದ್ದಾರೆ.
ಆಸ್ಪತ್ರೆಯ ಸ್ಪಷ್ಟನೆ:
ನೋಟಿಸ್ ಸ್ವೀಕರಿಸಿರುವುದನ್ನು ಖಚಿತಪಡಿಸಿರುವ ಸಹ್ಯಾದ್ರಿ ಆಸ್ಪತ್ರೆ, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದೆ. “ಈ ದುರಂತದ ಬಗ್ಗೆ ನಮಗೆ ತೀವ್ರ ದುಃಖವಿದೆ. ಯಕೃತ್ತು ಕಸಿ ಶಸ್ತ್ರಚಿಕಿತ್ಸೆಯು ಅತ್ಯಂತ ಸಂಕೀರ್ಣವಾದ ಪ್ರಕ್ರಿಯೆಯಾಗಿದ್ದು, ರೋಗಿಯಾಗಿದ್ದ ಬಾಪು ಕೊಮ್ಕರ್ ಅವರು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ‘ಅತಿ-ಅಪಾಯದ’ (high-risk) ವ್ಯಕ್ತಿಯಾಗಿದ್ದರು. ಶಸ್ತ್ರಚಿಕಿತ್ಸೆಯ ಅಪಾಯಗಳ ಕುರಿತು ಕುಟುಂಬಕ್ಕೆ ಮುಂಚಿತವಾಗಿಯೇ ಸಂಪೂರ್ಣ ಮಾಹಿತಿ ನೀಡಿ, ಸಮಾಲೋಚನೆ ನಡೆಸಲಾಗಿತ್ತು,” ಎಂದು ಆಸ್ಪತ್ರೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
“ಶಸ್ತ್ರಚಿಕಿತ್ಸೆಯ ನಂತರ ಬಾಪು ಅವರು ‘ಕಾರ್ಡಿಯೋಜೆನಿಕ್ ಶಾಕ್’ಗೆ ಒಳಗಾಗಿ ಮೃತಪಟ್ಟರೆ, ಆರಂಭದಲ್ಲಿ ಚೇತರಿಸಿಕೊಂಡಿದ್ದ ಕಾಮಿನಿ ಅವರು ನಂತರ ‘ಸೆಪ್ಟಿಕ್ ಶಾಕ್’ ಮತ್ತು ಬಹು-ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದರು. ಕೊಮ್ಕರ್ ಕುಟುಂಬದ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ,” ಎಂದು ಆಸ್ಪತ್ರೆ ಸಂತಾಪ ಸೂಚಿಸಿದೆ.



















