ಭೋಪಾಲ್: ಮೃತಪಟ್ಟವರು ಎಂದಾದರೂ ಎದ್ದು ಬರಲು ಸಾಧ್ಯವೇ? ಎಲ್ಲರೂ ಸಾಧ್ಯವಿಲ್ಲ ಎಂದೇ ಹೇಳುತ್ತೇವೆ. ಆದರೆ, ಒಂದೂವರೆ ವರ್ಷದ ಹಿಂದೆ ಮೃತಪಟ್ಟ, ಕುಟುಂಬಸ್ಥರು ಅಂತ್ಯಕ್ರಿಯೆ ಮಾಡಿದ ಬಳಿಕವೂ ಮಹಿಳೆಯೊಬ್ಬರು ದಿಢೀರನೆ ಪ್ರತ್ಯಕ್ಷರಾಗಿದ್ದಾರೆ. ಮೃತಪಟ್ಟ ಮಗಳು ಮರಳಿ ಮನೆಗೆ ಬಂದ ಅಚ್ಚರಿ ತಾಳದ ತಂದೆಯು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ವಿಚಾರಣೆ ಬಳಿಕ ಹಲವು ಅಚ್ಚರಿಯ ಅಂಶಗಳು ಬಯಲಾಗಿವೆ.
18 ತಿಂಗಳ ಹಿಂದೆ ಶವಸಂಸ್ಕಾರ
ಮಧ್ಯಪ್ರದೇಶದ ಮಂಡ್ಸೌರ್ ಜಿಲ್ಲೆಯಲ್ಲಿ ಲಲಿತಾ ಬಾಯಿ ಎಂಬ ಮಹಿಳೆಯು ಕಾಣೆಯಾಗಿದ್ದಳು. ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ ಬಳಿಕ ಶವವೊಂದು ಪತ್ತೆಯಾಗಿತ್ತು. ಮಹಿಳೆ ಕೈ ಮೇಲಿನ ಹಚ್ಚೆ (ಟ್ಯಾಟೂ), ಕಾಲಿಗೆ ಕಟ್ಟಿಕೊಂಡಿದ್ದ ಕಪ್ಪು ದಾರವನ್ನು ಗಮನಿಸಿದ ಪೋಷಕರು ಈಕೆಯೇ ಲಲಿತಾ ಬಾಯಿ ಎಂದು ಗುರುತಿಸಿದ್ದರು. ಬಳಿಕ ಆ ಶವವನ್ನು ಅಂತ್ಯಸಂಸ್ಕಾರ ಮಾಡಿದ್ದರು. ಆದರೀಗ, ಲಲಿತಾ ಬಾಯಿ ಮನೆಗೆ ಮರಳಿ ಬಂದಿದ್ದಾರೆ.
ನಾಲ್ವರಿಗೆ ಶಿಕ್ಷೆ ಘೋಷಣೆ
ಲಲಿತಾ ಬಾಯಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಕೊನೆಗೆ ನ್ಯಾಯಾಲಯವು ಇಮ್ರಾನ್, ಶಾರುಖ್, ಸೋನು ಹಾಗೂ ಇಜಾಜ್ ಎಂಬುವರು ಕೊಲೆ ಪ್ರಕರಣದ ದೋಷಿಗಳು ಎಂದು ತೀರ್ಪು ನೀಡಿತ್ತು. ಇವರು ಈಗ ಜೈಲಿನಲ್ಲಿ ಇದ್ದಾರೆ. ಆದರೆ, ಈಗ ಲಲಿತಾ ಬಾಯಿ ವಾಪಸ್ ಬಂದಿರುವುದು ಪೋಷಕರು, ಗ್ರಾಮಸ್ಥರು ಮಾತ್ರವಲ್ಲ ಪೊಲೀಸರಿಗೂ ಅಚ್ಚರಿ ತಂದಿದೆ.
ಅಷ್ಟಕ್ಕೂ ಆಗಿದ್ದೇನು?
18 ತಿಂಗಳ ಬಳಿಕ ಮರಳಿ ಬಂದ ಮಹಿಳೆಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. “ನಾನು ಶಾರುಖ್ (ಕೊಲೆ ಪ್ರಕರಣದ ಅಪರಾಧಿ) ಜತೆ ಭಾನುಪರಕ್ಕೆ ತೆರಳಿದ್ದೆ. ಅಲ್ಲಿ ನಾವಿಬ್ಬರೂ ಎರಡು ದಿನ ಇದ್ದೆವು. ಎರಡು ದಿನಗಳ ಬಳಿಕ ಶಾರುಖ್ ನನ್ನನ್ನು 5 ಲಕ್ಷ ರೂ.ಗೆ ಮಾರಾಟ ಮಾಡಿದ. ಹಾಗಾಗಿ ನಾನು ರಾಜಸ್ಥಾನದ ಕೋಟಾದಲ್ಲಿ ಇರಬೇಕಾಯಿತು. ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬರಲು ಒಂದೂವರೆ ವರ್ಷ ಬೇಕಾಯಿತು” ಎಂದು ಪೊಲೀಸರಿಗೆ ಮಹಿಳೆ ತಿಳಿಸಿದ್ದಾರೆ. ಅಲ್ಲದೆ, ವೋಟರ್ ಐಡಿ, ಆಧಾರ್ ಕಾರ್ಡ್ ತೋರಿಸಿ ತನ್ನ ಐಡೆಂಟಿಟಿ ದೃಢಪಡಿಸಿದ್ದಾಳೆ. ಆದರೆ, 18 ತಿಂಗಳ ಹಿಂದೆ ಅಂತ್ಯಕ್ರಿಯೆ ಮಾಡಲಾದ ಶವ ಯಾರದ್ದು ಎಂಬುದು ಇದುವರೆಗೆ ಗೊತ್ತಾಗಿಲ್ಲ.