ಪಾಟ್ನಾ: ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಪುತ್ರ, ಬಿಹಾರದ ಮಾಜಿ ಸಚಿವ ಮತ್ತು ಶಾಸಕ ತೇಜ್ ಪ್ರತಾಪ್ ಯಾದವ್ ಅವರು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷದಿಂದ ಉಚ್ಚಾಟನೆಗೊಂಡ ಬೆನ್ನಲ್ಲೇ ಹೊಸ ರಾಜಕೀಯ ಪಕ್ಷ ಹುಟ್ಟುಹಾಕುವ ಸುಳಿವು ನೀಡಿದ್ದಾರೆ. ಇದೇ ಜುಲೈ 10ರಂದು ಬಿಹಾರದ ಮಹುವಾ ಕ್ಷೇತ್ರದಲ್ಲಿ ಮೊದಲ ಸಾರ್ವಜನಿಕ ಕಾರ್ಯಕ್ರಮವನ್ನೂ ಅವರು ನಡೆಸಿದ್ದು, ಈ ರ‍್ಯಾಲಿಯಲ್ಲಿ ಅವರ ಬೆಂಬಲಿಗರು ‘ಟೀಮ್ ತೇಜ್ ಪ್ರತಾಪ್ ಯಾದವ್’ ಎಂಬ ಬರಹವಿರುವ ಹಸಿರು-ಬಿಳಿ ಬಾವುಟವನ್ನು ಹಿಡಿದಿದ್ದು ಕಂಡುಬಂದಿದೆ. 
ಇದು ತೇಜ್ ಪ್ರತಾಪ್ ಯಾದವ್‌ರ ಹೊಸ ರಾಜಕೀಯ ದಿಕ್ಕಿನ ಸೂಚನೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಈ ರ‍್ಯಾಲಿಯು ಆರ್‌ಜೆಡಿಯಿಂದ ಉಚ್ಚಾಟನೆಗೊಂಡ ನಂತರ ಅವರ ಮೊದಲ ಗಮನಾರ್ಹ ಸಾರ್ವಜನಿಕ ಕಾರ್ಯಕ್ರಮವಾಗಿದ್ದು, ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಅಲ್ಲದೇ, ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಯನ್ನೂ ಮೂಡಿಸಿದೆ.
ತೇಜ್ ಪ್ರತಾಪ್ ಯಾದವ್ ಅವರು ತಮ್ಮ ಎಂದಿನ ಹಸಿರು ಟೋಪಿಯೊಂದಿಗೆ ಮಹುವಾದಲ್ಲಿ ರೋಡ್‌ಶೋ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಉತ್ಸಾಹಿ ಬೆಂಬಲಿಗರ ದೊಡ್ಡ ಗುಂಪು ಭಾಗವಹಿಸಿತ್ತು. ಇದು ಆರ್‌ಜೆಡಿಯಿಂದ ಉಚ್ಚಾಟನೆಯಾಗಿದ್ದರೂ ಅವರಿಗೆ ಇನ್ನೂ ಜನಮನ್ನಣೆ ಇದೆ ಎಂಬುದನ್ನು ತೋರಿಸಿದೆ. ರ‍್ಯಾಲಿಯಲ್ಲಿ ಅವರು, “ನಾನು ಜನತೆಯ ಇಚ್ಛೆಯಂತೆ ಬದುಕುತ್ತೇನೆ. ಜನತೆ ಏನು ಬಯಸುತ್ತಾರೋ, ಅದನ್ನು ನಾನು ಮಾಡುತ್ತೇನೆ. ಜನತೆ ಎಲ್ಲಿಂದ ಚುನಾವಣೆಗೆ ಸ್ಪರ್ಧಿಸಬೇಕೆಂದು ಒತ್ತಾಯಿಸುತ್ತಾರೋ, ಅಲ್ಲಿಂದ ಸ್ಪರ್ಧಿಸುತ್ತೇನೆ. ಯಾವ ಪಕ್ಷದಿಂದ ಸ್ಪರ್ಧಿಸುವೆ ಎಂಬುದು ನಂತರ ತೀರ್ಮಾನವಾಗುತ್ತದೆ,” ಎಂದು ಘೋಷಿಸಿದ್ದಾರೆ.

ತೇಜ್ ಪ್ರತಾಪ್ ಅವರು ಮಹುವಾದಲ್ಲಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು ಪರಿಶೀಲಿಸಿ, ಈ ಯೋಜನೆಯನ್ನು ತಾವು ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದಂತೆ ಪೂರ್ಣಗೊಳಿಸಿರುವುದಾಗಿ ತಿಳಿಸಿದ್ದಾರೆ. “ನಾನು ಯಾವ ಭರವಸೆಯನ್ನು ನೀಡಿದ್ದೇನೆಯೋ, ಅದನ್ನು ಈಡೇರಿಸುತ್ತೇನೆ,” ಎಂದು ಅವರು ಒತ್ತಿ ಹೇಳಿದ್ದಾರೆ.
ಆರ್‌ಜೆಡಿಯಿಂದ ಉಚ್ಚಾಟನೆ
2 ತಿಂಗಳ ಹಿಂದೆ ಅವರ ತಂದೆ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ತೇಜ್ ಪ್ರತಾಪ್ ಯಾದವ್ ಅವರನ್ನು ಆರ್‌ಜೆಡಿಯಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿದ್ದಾರೆ. ತೇಜ್ ಪ್ರತಾಪ್‌ರ “ಬೇಜವಾಬ್ದಾರಿಯುತ ವರ್ತನೆ”ಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿಯೂ ಅವರು ತಿಳಿಸಿದ್ದಾರೆ. ತೇಜ್ ಪ್ರತಾಪ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅನುಷ್ಕಾ ಯಾದವ್ ಎಂಬ ಮಹಿಳೆಯೊಂದಿಗೆ 12 ವರ್ಷಗಳಿಂದ ಸಂಬಂಧದಲ್ಲಿದ್ದೇನೆ ಎಂದು ಪೋಸ್ಟ್ ಮಾಡಿದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿತ್ತು. ಆದರೆ, ತೇಜ್ ಪ್ರತಾಪ್ ತಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ಫೋಟೋಗಳನ್ನು ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.
ರಾಜಕೀಯ ಭವಿಷ್ಯ
ತೇಜ್ ಪ್ರತಾಪ್‌ರ ಈ ರ‍್ಯಾಲಿ ಮತ್ತು ‘ಟೀಮ್ ತೇಜ್ ಪ್ರತಾಪ್ ಯಾದವ್’ ಬಾವುಟವು ಅವರು ತಮ್ಮ ರಾಜಕೀಯ ಗುರುತನ್ನು ಮರುಸ್ಥಾಪಿಸಲು ತಯಾರಿ ನಡೆಸುತ್ತಿರುವ ಸಂಕೇತ ಎಂದು ಹೇಳಲಾಗುತ್ತಿದೆ. ರಾಜಕೀಯ ವಿಶ್ಲೇಷಕರು ತೇಜ್ ಪ್ರತಾಪ್ ಯಾದವ್ ಹೊಸ ಪಕ್ಷವನ್ನು ರಚಿಸಬಹುದು ಅಥವಾ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಊಹಿಸುತ್ತಿದ್ದಾರೆ.
ತೇಜ್ ಪ್ರತಾಪ್ ಅವರು ಮಹುವಾ ಕ್ಷೇತ್ರದಿಂದ 2015 ರಲ್ಲಿ ಶಾಸಕರಾಗಿದ್ದರು ಮತ್ತು 2020 ರಲ್ಲಿ ಹಾಸನ್‌ಪುರ ಕ್ಷೇತ್ರದಿಂದ ಗೆದ್ದಿದ್ದರು. ಈಗ, ಮಹುವಾದಿಂದ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಸುಳಿವನ್ನು ಅವರು ನೀಡಿದ್ದಾರೆ. ಆದರೆ ಯಾವ ಪಕ್ಷದ ಟಿಕೆಟ್‌ನಲ್ಲಿ ಅಥವಾ ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
 
                                 
			 
			
 
                                 
                                


















