ದೆಹಲಿ ಸಿಎಂ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಈ ಬೆನ್ನಲ್ಲೇ ಅತಿಶಿ ಮಾರ್ಲೆನಾ ಸಿಎಂ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೇ ಆಮ್ ಆದ್ಮಿ ಪಕ್ಷ (ಎಎಪಿ) ಅತಿಶಿ ಮರ್ಲೆನಾ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದೆ. ಮಂಗಳವಾರ ಬೆಳಿಗ್ಗೆ ಕೇಜ್ರಿವಾಲ್ ನಿವಾಸದಲ್ಲಿ ಸಭೆ ನಡೆದಿತ್ತು. ಈ ಸಂದರ್ಭದಲ್ಲಿ ಸಿಎಂ ಸ್ಥಾನಕ್ಕಾಗಿ ಹಲವಾರು ಹೆಸರುಗಳು ಕೇಳಿ ಬಂದವು. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಅತಿಶಿ ಅವರ ಹೆಸರುಗಳು ಮುಂಚೂಣಿಯಲ್ಲಿದ್ದವು. ಆದರೆ, ಕೊನೆಗೆ ಕೇಜ್ರಿವಾಲ್ ಅವರು ಅತಿಶಿ ಹೆಸರನ್ನು ಘೋಷಿಸಿದರು. ಇದಕ್ಕೆ ಇನ್ನುಳಿದ ನಾಯಕರು ಬೆಂಬಲ ಸೂಚಿಸಿದ್ದಾರೆ.
ದೆಹಲಿ ಮದ್ಯ ನೀತಿಯ ಪ್ರಕರಣದಲ್ಲಿ ಎಎಪಿ ನಾಯಕರು ಜೈಲಿಗೆ ಹೋಗಬೇಕಾದಾಗ, ಅತಿಶಿ ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದರು. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅಬಕಾರಿ ನೀತಿ ಪ್ರಕರಣದಡಿ ತಿಹಾರ್ ಜೈಲು ಪಾಲಾಗಿದ್ದರು. ಅವರನ್ನು ಸೆಪ್ಟೆಂಬರ್ 13 ರಂದು ಜಾಮೀನಿನ ಮೇಲೆ ಕೋರ್ಟ್ ಬಿಡುಗಡೆ ಮಾಡಿತ್ತು. ಬಿಡುಗಡೆಯಾಗುತ್ತಿದ್ದಂತೆ ಸೆ. 15ರಂದು ಎರಡು ದಿನಗಳಲ್ಲಿ ರಾಜೀನಾಮೆ ನೀಡುವುದಾಗಿ ಕೇಜ್ರಿವಾಲ್ ಘೋಷಿಸಿದ್ದರು. ಅಲ್ಲದೇ, ಸಾರ್ವಜನಿಕರು ತೀರ್ಪು ನೀಡುವವರೆಗೂ ಸಿಎಂ ಸ್ಥಾನದಲ್ಲಿ ಕೂರುವುದಿಲ್ಲ ಎಂದು ಹೇಳಿದ್ದರು.
ಕೋರ್ಟ್ ವಿಧಿಸಿದ್ದ ಕೆಲವು ನಿರ್ಬಂಧಗಳು ಕೂಡ ಅರವಿಂದ್ ಕೇಜ್ರಿವಾಲ್ ಸಿಎಂ ಆಗಿ ಮುಂದುವರೆಯಲು ಕಷ್ಟವಾಗುವಂತಾಗಿತ್ತು. ಅಲ್ಲದೇ, ಜನರ ಮುಂದೆ ನಾನು ಅಧಿಕಾರಕ್ಕಾಗಿ ಅಂಟಿಕೊಂಡಿಲ್ಲ ಎಂಬ ಸಂದೇಶವನ್ನೂ ಕೇಜ್ರಿವಾಲ್ ಸಾರಬೇಕಿತ್ತು. ಈ ಎಲ್ಲ ಬೆಲವಣಿಗೆಗಳಿಂದಾಗಿ ಈಗ ಅತಿಶಿ ದೆಹಲಿ ಸಿಎಂ ಆಗಿ ಅಧಿಕಾರ ಚಲಾಯಿಸಲಿದ್ದಾರೆ.