ಲಕ್ನೋ: ಪ್ರೇಯಸಿಯ ಪತಿ ಹಾಗೂ ತಂದೆಯನ್ನು ಕೊಲ್ಲಲೆಂದು ವ್ಯಕ್ತಿಯೊಬ್ಬ ಸುಪಾರಿ ಕೊಟ್ಟಿದ್ದು, ಆ ಸುಪಾರಿ ಕಿಲ್ಲರ್ ಗಳು ತಪ್ಪಾಗಿ ಯಾವುದೋ ಕ್ಯಾಬ್ ಡ್ರೈವರನ್ನು(cab driver) ಕೊಂದಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ. ಚಾಲಕನ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಎಲ್ಲ ಮೂವರು ಆರೋಪಿಗಳನ್ನೂ ಬಂಧಿಸಿದ್ದಾರೆ. ಜೊತೆಗೆ, ಆರೋಪಿಗಳಿಂದ ಪಿಸ್ತೂಲ್, 14 ಸಜೀವ ಬುಲೆಟ್ ಗಳು, ಮೂರು ಮೊಬೈಲ್ ಫೋನ್ ಗಳು ಮತ್ತು ಕೊಲೆಗೆ ಬಳಸಿಕ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ಬಯಲಾಗಿದ್ದು ಹೇಗೆ?:
ಡಿಸೆಂಬರ್ 30ರಂದು ಲಕ್ನೋದ ಮದೇಹ್‌ಗಂಜ್‌ನಲ್ಲಿ ಶವವೊಂದು ಪತ್ತೆಯಾಗಿತ್ತು. ಮೃತನನ್ನು ಮೊಹಮ್ಮದ್ ರಿಜ್ವಾನ್ ಎಂದು ಗುರುತಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು, ಅಫ್ತಾಬ್ ಅಹ್ಮದ್, ಯಾರೀಸ್ ಮತ್ತು ಕೃಷ್ಣಕಾಂತ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಈ ಪೈಕಿ ಅಫ್ತಾಬ್ ಅಹ್ಮದ್ ಪ್ರಮುಖ ಆರೋಪಿ. ಈತ ಒಬ್ಬ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಕೆಯ ಪತಿ ಮತ್ತು ಅಪ್ಪನನ್ನು ಕೊಲ್ಲಲು ಅಫ್ತಾಬ್ ಯೋಜನೆ ರೂಪಿಸಿದ್ದ.
ಈ ವಿಷಯವನ್ನು ಅವನು ಯಾಸೀರ್ ಗೆ ತಿಳಿಸಿದ್ದ. ಕೊಲೆಗೆ ಸುಪಾರಿಯನ್ನೂ ಕೊಟ್ಟಿದ್ದ. ಯಾಸೀರ್ ತನ್ನೊಂದಿಗೆ ಕೃಷ್ಣಕಾಂತ್ ನನ್ನು ಸೇರಿಸಿಕೊಂಡು ಕೊಲೆಗೆ ಪ್ಲ್ಯಾನ್ ರೂಪಿಸಿದ್ದ. ಅದರಂತೆ, ಡಿ.30ರಂದು ಮಹಿಳೆಯ ಅಪ್ಪ ಇರ್ಫಾನ್ ಎಂಬವರನ್ನು ಕೊಲ್ಲಲೆಂದು ಇವರು ಮದೇಹ್‌ಗಂಜ್ ಗೆ ತೆರಳಿದ್ದರು. ಆದರೆ, ಗುರುತು ಪತ್ತೆಹಚ್ಚುವಲ್ಲಿ ಎಡವಟ್ಟಾಗಿ ಅಮಾಯಕ ಕ್ಯಾಬ್ ಚಾಲಕ ಮೊಹಮ್ಮದ್ ರಿಜ್ವಾನ್ ನನ್ನು ಕೊಲೆಗೈದಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ರವೀನಾ ತ್ಯಾಗಿ ತಿಳಿಸಿದ್ದಾರೆ.