ಆಗ್ರಾ: ಉತ್ತರ ಪ್ರದೇಶದ ಆಗ್ರಾದ ಸೈಯಾನ್ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಭೀಕರ ಕೊಲೆ ಪ್ರಕರಣದ ರಹಸ್ಯವನ್ನು ಕೊನೆಗೂ ಪೊಲೀಸರು ಭೇದಿಸಿದ್ದಾರೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ತನ್ನ ಪ್ರಿಯಕರನ ಸಹಾಯದೊಂದಿಗೆ ಬರ್ಬರವಾಗಿ ಕೊಲೆ ಮಾಡಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸುಟ್ಟು ಕರಕಲಾಗಿದ್ದ ಶವದ ಕೈ ಮೇಲಿದ್ದ ‘ಹಚ್ಚೆ’ ಮತ್ತು ಮದ್ಯದ ಬಾಟಲಿ ಮೇಲಿದ್ದ ಕ್ಯೂಆರ್ ಕೋಡ್ ಹಂತಕರ ಪತ್ತೆಗೆ ಸಹಾಯ ಮಾಡಿದೆ.
ಏ.1ರ ರಾತ್ರಿ ಸೈಯಾನ್ ಪ್ರದೇಶದಲ್ಲಿ ಅರ್ಧ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದಾಗ ಇಡೀ ಭಾಗದಲ್ಲಿ ಆತಂಕ ಮನೆ ಮಾಡಿತ್ತು. ಮೃತದೇಹದ ಮುಖ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಆದರೆ, ಮೃತನ ಮುಂಗೈ ಮೇಲಿದ್ದ ‘ಲೋಕೇಂದ್ರ’ ಎಂಬ ಹೆಸರಿನ ಹಚ್ಚೆ (Tattoo) ಪೊಲೀಸರ ತನಿಖೆಗೆ ಸಹಾಯ ಮಾಡಿತು. ಮರುದಿನವೇ ಲೋಕೇಂದ್ರ ಎಂಬವರ ಸಹೋದರ ತನ್ನ ಅಣ್ಣ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರಿಗೆ ಬೆಚ್ಚಿಬೀಳಿಸುವ ವಿಚಾರ ಗೊತ್ತಾಗುತ್ತಾ ಹೋಗಿದೆ.
ಮದ್ಯದ ಪಾರ್ಟಿ ಬಳಿಕ ಕೊಲೆ
ಪೊಲೀಸರಿಗೆ ತನಿಖೆಯ ವೇಳೆ ಲೋಕೇಂದ್ರನ ಪತ್ನಿ ಮತ್ತು ಆಕೆಯ ಪ್ರಿಯಕರ ಮಹೇಶ್ ಪ್ರಜಾಪತಿ ನಡುವೆ ದೀರ್ಘಕಾಲದ ಅಕ್ರಮ ಸಂಬಂಧ ಇರುವುದು ತಿಳಿದುಬಂದಿದೆ. ಇತ್ತೀಚೆಗೆ ಈ ವಿಷಯ ಲೋಕೇಂದ್ರನಿಗೆ ತಿಳಿದು ಮನೆಯಲ್ಲಿ ಗಲಾಟೆಯಾಗಿತ್ತು. ಇದರಿಂದ ರೊಚ್ಚಿಗೆದ್ದ ಪ್ರಿಯಕರ ಮತ್ತು ಪತ್ನಿ, ಲೋಕೇಂದ್ರನನ್ನು ಮುಗಿಸಲು ಸಂಚು ರೂಪಿಸಿದ್ದರು. ಏಪ್ರಿಲ್ 1ರಂದು ಲೋಕೇಂದ್ರ ಮನೆಯಿಂದ ಹೊರಬರುತ್ತಿದ್ದಂತೆ ಪತ್ನಿ ಪ್ರಿಯಕರನಿಗೆ ಮಾಹಿತಿ ನೀಡಿದ್ದಾಳೆ. ದಾರಿಯಲ್ಲಿ ಲೋಕೇಂದ್ರನನ್ನು ಭೇಟಿಯಾದ ಮಹೇಶ್ ಮತ್ತು ಅವನ ಗೆಳೆಯ ಧರಮ್ವೀರ್, ಕುಡಿಯಲು ಆಹ್ವಾನಿಸಿ ಹೊಲವೊಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಲೋಕೇಂದ್ರನಿಗೆ ಮದ್ಯ ಕುಡಿಸಿ ಪ್ರಜ್ಞೆ ತಪ್ಪಿಸಿ, ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಸಾಕ್ಷ್ಯ ನಾಶಪಡಿಸಲು ಮೃತದೇಹದ ಮೇಲೆ ಪೆಟ್ರೋಲ್ ಸುರಿದು, ಗೋಧಿ ಕಟ್ಟುಗಳಿಂದ ಮುಚ್ಚಿ ಬೆಂಕಿ ಹಚ್ಚಿದ್ದರು.
ಪಶ್ಚಿಮ ಆಗ್ರಾದ ಡಿಸಿಪಿ ಆದಿತ್ಯ ಕುಮಾರ್ ನೇತೃತ್ವದ ಐದು ತಂಡಗಳು ಈ ಕೇಸ್ ಭೇದಿಸಲು ಹಗಲಿರುಳು ಶ್ರಮಿಸಿವೆ. ಘಟನಾ ಸ್ಥಳದಲ್ಲಿ ಸಿಕ್ಕ ಮದ್ಯದ ಬಾಟಲಿಗಳ ಕ್ಯೂಆರ್ ಕೋಡ್ ಮತ್ತು ಅಲ್ಲಿದ್ದ ಕೆಲವು ಕಾಗದದ ತುಂಡುಗಳು ಹಂತಕರನ್ನು ಪತ್ತೆಹಚ್ಚಲು ನೆರವಾಗಿವೆ. ಆ ಕಾಗದದ ತುಂಡುಗಳು ಸ್ಥಳೀಯ ಹಣ್ಣು ಮಾರಾಟಗಾರನೊಬ್ಬ ಬಳಸುತ್ತಿದ್ದವು ಎಂದು ತಿಳಿದುಬಂದಿದ್ದು, ಇದನ್ನು ಬೆನ್ನಟ್ಟಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಲೋಕೇಂದ್ರನ ಪತ್ನಿ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ: ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ – ಪತಿ ಅರೆಸ್ಟ್



















