ಉಡುಪಿ: ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಜನ – ಜೀವನ ಅಸ್ತವ್ಯಸ್ಥಗೊಂಡಿದೆ.
ಸೋಮವಾರ ಕೂಡ ಜಿಲ್ಲೆಯಾದ್ಯಂತ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿತ್ತು. ವ್ಯಾಪಕವಾಗಿ ಮಳೆ ಕೂಡ ಸುರಿದಿದೆ. ಮಂಗಳವಾರ ಕೂಡ ರೆಡ್ ಅಲರ್ಟ್ ಇದ್ದು, ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ವಿದ್ಯಾರ್ಥಿಗಳ ಸುರಕ್ಷತೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ, ಐಟಿಐ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಅಲ್ಲದೇ, ದ್ವಿತೀಯ ಪಿಯುಸಿ ಪರೀಕ್ಷೆ- 3 ನಡೆಯುತ್ತಿದ್ದು, ಅದು ಎಂದಿನಂತೆ ನಡೆಯಲಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಎದುರಿಸಬೇಕು ಎಂದಿದ್ದಾರೆ.