ಬೆಳಗಾವಿ: ಪಂಚಮಸಾಲಿ ಸಮುದಾಯದವರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭದಲ್ಲಿ ನಡೆದ ಲಾಠಿ ಚಾರ್ಜ್ ಬಗ್ಗೆ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್, ಪಂಚಮಸಾಲಿ ಸಮುದಾಯದಿಂದ ಹೋರಾಟ ನಡೆಸುವುದಕ್ಕಾಗಿ 2 ದಿನಗಳ ಹಿಂದೆ ಅರ್ಜಿ ಬಂದಿತ್ತು. ಆದರೆ, ಹೋರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸೋಮವಾರ ಸ್ವಾಮೀಜಿ ಜೊತೆ ಚರ್ಚೆ ನಡೆಸಲಾಗಿತ್ತು.
ಹೋರಾಟಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿ ಕೊಡಲಾಗಿತ್ತು. ಶಾಂತಿಯುತವಾಗಿ ಹೋರಾಟ ನಡೆಸುವಂತೆ ಆದೇಶ ನೀಡಲಾಗಿತ್ತು. ಲಾಠಿಚಾರ್ಜ್ ವಿಚಾರದಲ್ಲಿ ಹೈಕೋರ್ಟ್ ಆದೇಶ ಪಾಲಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಶಾಂತಿಯುತವಾಗಿ ಧರಣಿ ಮಾಡಿ ಎಂದು ಅನುಮತಿ
ನೀಡಲಾಗಿತ್ತು. ಈ ಕುರಿತು ಸಭೆ ನಡೆಸಲಾಗಿತ್ತು. ಸುವರ್ಣಸೌಧದ ಒಳಗೆ ಇರುವ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡುತ್ತೇವೆ ಅಂತ ಹಾಳಿದರು. 10 ಸಾವಿರ ಜನ ಒಳಗೆ ಹೋಗುತ್ತೇವೆ ಎಂದರು. 10 ಜನರಿಗೆ ಮಾತ್ರ ಅವಕಾಶ ಎನ್ನಲಾಗಿತ್ತು. ಆದರೆ, ಇದಕ್ಕೆ ಒಪ್ಪದೆ ಬ್ಯಾರಿಕೆಡ್ ತಳ್ಳಿ ಹೆದ್ದಾರಿಗೆ ಬರಲು ಯತ್ನಿಸಿದರು.
ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. 14 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. 70ಕ್ಕೂ ಅಧಿಕ ಜನರನ್ನು ಈಗಾಗಲೇ ವಶಕ್ಕೆ ಪಡೆದಿದ್ದು, ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸುತ್ತೇವೆ ಎಂದಿದ್ದಾರೆ.