ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜಪಾನ್ ಪ್ರಧಾನಿ ಸನಾಯೆ ತಕೈಚಿ ಅವರ ನಡುವಿನ ಇತ್ತೀಚಿನ ಭೇಟಿ ವಿಲಕ್ಷಣ ಮತ್ತು ಮುಜುಗರದ ಪ್ರಸಂಗನ್ನು ಸೃಷ್ಟಿಸಿದೆ. ದ್ವಿಪಕ್ಷೀಯ ಮಾತುಕತೆಯ ವೇಳೆ ಟ್ರಂಪ್ ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ಅಮೆರಿಕದ ಮೇಲೆ ನಡೆಸಿದ್ದ ಭೀಕರ ‘ಪರ್ಲ್ ಹಾರ್ಬರ್’ ದಾಳಿಯನ್ನು ನೆನಪಿಸುವ ಮೂಲಕ ಜಪಾನ್ ಪ್ರಧಾನಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಆಘಾತಕಾರಿ ಪ್ರಶ್ನೆ ಮತ್ತು ಮುಜುಗರ
ಇರಾನ್ ಮೇಲಿನ ದಾಳಿಯ ಸಂದರ್ಭದಲ್ಲಿ ಅಮೆರಿಕವು ತನ್ನ ಮಿತ್ರರಾಷ್ಟ್ರಗಳಿಗೆ ಮುನ್ಸೂಚನೆ ನೀಡಿಲ್ಲ ಎಂಬ ಪ್ರಶ್ನೆ ಎದುರಾದಾಗ, ಟ್ರಂಪ್ ಅದನ್ನು ಸಮರ್ಥಿಸಿಕೊಳ್ಳಲು ಹೋಗಿ ಜಪಾನ್ ದೇಶವನ್ನೇ ಗುರಿಯಾಗಿಸಿಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. “ನಾವು ದಾಳಿಯ ಬಗ್ಗೆ ಯಾರಿಗೂ ತಿಳಿಸಲಿಲ್ಲ ಏಕೆಂದರೆ ನಮಗೆ ಅದು ಸರ್‌ಪ್ರೈಸ್ ದಾಳಿ ಆಗಿರಬೇಕಿತ್ತು. ಅನಿರೀಕ್ಷಿತ ದಾಳಿಯ ಬಗ್ಗೆ ಜಪಾನ್‌ಗಿಂತ ಚೆನ್ನಾಗಿ ಬೇರೆ ಯಾರಿಗೆ ತಾನೇ ತಿಳಿದಿದೆ? ಅಂದು ಪರ್ಲ್ ಹಾರ್ಬರ್ ದಾಳಿಯ ಬಗ್ಗೆ ನೀವೇಕೆ ನನಗೆ ಹೇಳಿರಲಿಲ್ಲ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಟ್ರಂಪ್ ಅವರ ಈ ‘ಜೋಕ್’ ಕೇಳಿ ಅಲ್ಲಿ ನೆರೆದಿದ್ದ ಅಧಿಕಾರಿಗಳು ಮತ್ತು ಮಾಧ್ಯಮದವರು ಒಂದು ಕ್ಷಣ ದಂಗಾದರು. ಜಪಾನ್ ಪ್ರಧಾನಿ ಸನಾಯೆ ತಕೈಚಿ ಅವರು ಈ ಮಾತಿನಿಂದ ತೀವ್ರ ಮುಜುಗರಕ್ಕೊಳಗಾಗಿ, ಮೌನಕ್ಕೆ ಶರಣಾದ ಪ್ರಸಂಗ ನಡೆಯಿತು.
ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು?
ಟ್ರಂಪ್ ಅವರ ಈ ಹೇಳಿಕೆಯು ಕೇವಲ ತಮಾಷೆಯಾಗಿ ಕಂಡುಬಂದರೂ, ಅದರ ಹಿಂದೆ ಗಂಭೀರವಾದ ರಾಜತಾಂತ್ರಿಕ ಅಸಮಾಧಾನ ಅಡಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕವು ಇತ್ತೀಚೆಗೆ ಹೊರ್ಮುಜ್ ಜಲಸಂಧಿಯಲ್ಲಿ ಭದ್ರತೆ ಒದಗಿಸಲು ಮಿತ್ರರಾಷ್ಟ್ರಗಳ ಸಹಾಯ ಕೋರಿತ್ತು. ಆದರೆ ಜಪಾನ್ ಸೇರಿದಂತೆ ಕೆಲವು ದೇಶಗಳು ಈ ಬಗ್ಗೆ ನಿರೀಕ್ಷಿತ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಟ್ರಂಪ್ ಅವರ ಕೋಪಕ್ಕೆ ಕಾರಣ ಎನ್ನಲಾಗಿದೆ. ಜಪಾನ್ ತನ್ನ ಮಿಲಿಟರಿ ಶಕ್ತಿಯನ್ನು ಅಮೆರಿಕದ ಹಿತಾಸಕ್ತಿಗಾಗಿ ಬಳಸಲು ಹಿಂದೇಟು ಹಾಕುತ್ತಿರುವುದಕ್ಕೆ ಟ್ರಂಪ್ ಈ ಮೂಲಕ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐತಿಹಾಸಿಕ ಕಹಿ ನೆನಪಿನ ಸ್ಮರಣೆ
1941ರಲ್ಲಿ ಜಪಾನ್ ಅಮೆರಿಕದ ಪರ್ಲ್ ಹಾರ್ಬರ್ ನೌಕಾನೆಲೆಯ ಮೇಲೆ ನಡೆಸಿದ ಅನಿರೀಕ್ಷಿತ ದಾಳಿಯು ಇತಿಹಾಸದ ಕರಾಳ ಅಧ್ಯಾಯಗಳಲ್ಲಿ ಒಂದು. ಈಗ ದಶಕಗಳ ನಂತರ, ಅತ್ಯಂತ ಆಪ್ತ ಮಿತ್ರರಾಷ್ಟ್ರಗಳಾಗಿರುವ ಅಮೆರಿಕ ಮತ್ತು ಜಪಾನ್ ನಡುವಿನ ಅಧಿಕೃತ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು ಉಭಯ ದೇಶಗಳ ಸಂಬಂಧದ ಮೇಲೆ ಕರಿನೆರಳು ಬೀರಿದೆ. ಟ್ರಂಪ್ ಅವರು ಜಪಾನ್‌ನ ‘ಸಮುರಾಯ್’ ಸಂಸ್ಕೃತಿ ಮತ್ತು ಆರ್ಥಿಕ ನೀತಿಗಳ ಬಗ್ಗೆ ಪದೇ ಪದೇ ಇಂತಹ ಚುಚ್ಚುಮಾತುಗಳನ್ನು ಆಡುತ್ತಿರುವುದು ಜಪಾನ್ ರಾಜತಾಂತ್ರಿಕರನ್ನು ಕಳವಳಗೊಳಿಸಿದೆ.
ಈ ಭೇಟಿಯ ನಂತರ ಜಪಾನ್ ಪ್ರಧಾನಿ ಜಾಗತಿಕ ಶಾಂತಿಯ ಬಗ್ಗೆ ಮಾತನಾಡಿದರಾದರೂ, ಟ್ರಂಪ್ ಅವರ ಪರ್ಲ್ ಹಾರ್ಬರ್ ಚುಚ್ಚುಮಾತು ಇಡೀ ಸಭೆಯ ಗಂಭೀರತೆಯನ್ನೇ ಹಾಳು ಮಾಡಿದ್ದಂತೂ ಸತ್ಯ.
ಇದನ್ನೂ ಓದಿ : ಮೋದಿ-ಟ್ರಂಪ್ ಗೆಳೆತನವೇ LPG ಅಭಾವಕ್ಕೆ ಕಾರಣ – ಸಚಿವ ಬೋಸರಾಜು



















