ಮುಂಬೈ: ಪ್ರಯಾಗ್‌ರಾಜ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಮಹಾ ಕುಂಭಮೇಳದಲ್ಲಿ ಶಿವಸೇನೆ(ಯುಬಿಟಿ) ನಾಯಕ ಉದ್ಧವ್ ಠಾಕ್ರೆಯವರು ಏಕೆ ಪುಣ್ಯ ಸ್ನಾನ ಮಾಡಲಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಯುಬಿಟಿ ಬಣದ ಮುಖಂಡ ಸಂಜಯ್ ರಾವತ್, “ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಏಕೆ ಕುಂಭದಲ್ಲಿ ಪುಣ್ಯಸ್ನಾನ ಮಾಡಿಲ್ಲ” ಎಂದು ಕೇಳಿದ್ದಾರೆ.
ಕಳೆದ ವಾರ ಉತ್ತರಪ್ರದೇಶದ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದ ಏಕನಾಥ ಶಿಂಧೆ ಅವರು, ಕುಂಭಮೇಳಕ್ಕೆ ಹೋಗದಿರುವ ಬಗ್ಗೆ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಪ್ರಶ್ನಿಸಿದ ಬೆನ್ನಲ್ಲೇ ಈ ವಾಕ್ಸಮರ ನಡೆದಿದೆ.
ಶಿಂಧೆಗಿಂತಲೂ ಮೊದಲು, ಬಿಜೆಪಿಯ ಹಿರಿಯ ನಾಯಕ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ತಮ್ಮ ಕುಟುಂಬದೊಂದಿಗೆ ಕುಂಭಮೇಳಕ್ಕೆ ಭೇಟಿ ನೀಡಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಸ್ನಾನ ಮಾಡಿದ್ದರು.
ಈಗ ಶಿಂಧೆಯವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕ ಸಂಜಯ್ ರಾವತ್, “ಗೌರವಾನ್ವಿತ ಆರೆಸ್ಸೆಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಜೀ ಅವರಿಗೆ ಈ ಪ್ರಶ್ನೆಯನ್ನು ಕೇಳುವ ಧೈರ್ಯವನ್ನು ಶಿಂಧೆ ಮಾಡಬೇಕು! ಏಕೆ, ಬಿಜೆಪಿಯ ಬಾಸ್ ಹಿಂದೂ ಅಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, “ಪ್ರಧಾನಿ ನರೇಂದ್ರ ಮೋದಿ ಅವರು ಕುಂಭಮೇಳದಲ್ಲಿ ಸ್ನಾನ ಮಾಡುತ್ತಿರುವ ಫೋಟೋವನ್ನು ನಾನು ನೋಡಿದ್ದೇನೆ. ಆದರೆ ಅವರು ಪ್ರಧಾನಿಯಾಗುವ ಮೊದಲು ಕುಂಭಮೇಳಕ್ಕೆ ಭೇಟಿ ನೀಡಿದ ಅವರ ಒಂದೇ ಒಂದು ಫೋಟೋವನ್ನೂ ನಾನು ನೋಡಿಲ್ಲ” ಎಂದೂ ರಾವತ್ ಕುಟುಕಿದ್ದಾರೆ.
ಇದರೊಂದಿಗೆ, ಶಿಂಧೆ ಅವರಿಗೆ ಬಿಜೆಪಿ ಸ್ವಲ್ಪ ಹಿಂದುತ್ವದ ಪಾಠ ಕಲಿಸಬೇಕು ಎಂದೂ ಹೇಳಿದ ರಾವತ್, “ನಮ್ಮ ಶಿವಸೇನೆ (ಯುಬಿಟಿ) ನಕಲಿ ಹಿಂದುತ್ವ ಮತ್ತು ಪ್ರಚಾರದ ಸ್ಟಂಟ್‌ಗಳನ್ನು ನಂಬುವುದಿಲ್ಲ” ಎಂದು ಹೇಳಿದರು.
ಶಿಂಧೆ ಏನು ಹೇಳಿದ್ದರು?
ಉತ್ತರಪ್ರದೇಶದ ಮಹಾ ಕುಂಭ ಮೇಳಕ್ಕೆ ಹೋಗದೇ ಇರಲು ನಿರ್ಧರಿಸಿದ್ದಕ್ಕಾಗಿ ಉದ್ಧವ್ ಠಾಕ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಏಕನಾಥ ಶಿಂಧೆ ಅವರು, ಹಿಂದುತ್ವದ ಹೆಸರಿನಲ್ಲಿ ಪ್ರಚಾರ ಮಾಡುವವರು ಪ್ರಮುಖ ಧಾರ್ಮಿಕ ಕಾರ್ಯಕ್ರಮವನ್ನೇ ತಪ್ಪಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದರು.
“ಮಹಾಕುಂಭ ಮೇಳಕ್ಕೆ ಹೋಗದವರು ಯಾಕೆ ಹೋಗಿಲ್ಲ ಎಂಬುದನ್ನು ವಿವರಿಸಬೇಕು. ಅವರು ತಾವು ಹಿಂದೂಗಳು ಎಂದು ಹೇಳಿಕೊಳ್ಳುತ್ತಾರೆ. ಬಾಳಾಸಾಹೇಬ್ ಠಾಕ್ರೆ ಹೆಮ್ಮೆಯಿಂದ ‘ಗರ್ವ್ ಸೆ ಕಹೋ ಹಮ್ ಹಿಂದೂ ಹೈ’ (ನಾವು ಹಿಂದೂಗಳು ಎಂದು ಹೆಮ್ಮೆಯಿಂದ ಘೋಷಿಸಿ) ಎಂಬ ಘೋಷಣೆಯನ್ನು ನೀಡಿದರು. ಆದರೆ ಈಗ ಉದ್ಧವ್ ಠಾಕ್ರೆ ಅವರು ತಮ್ಮನ್ನು ತಾವು ಹಿಂದೂಗಳು ಎಂದು ಹೇಳಿಕೊಳ್ಳಲು ಮಾತ್ರವಲ್ಲ, ಬಾಳ್ ಠಾಕ್ರೆ ಅವರನ್ನು ಹಿಂದೂ ಹೃದಯ ಸಾಮ್ರಾಟ್ ಎಂದು ಕರೆಯಲೂ ಹೆದರುತ್ತಿದ್ದಾರೆ” ಎಂದು ಶಿಂಧೆ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಉದ್ಧವ್ ಠಾಕ್ರೆ, “ನಾನು ಗಂಗೆಯನ್ನು ಗೌರವಿಸುತ್ತೇನೆ. ಆದರೆ 50 ಕೋಟಿ ರೂ.ಗಳನ್ನು ದೋಚಿ, ನಂತರ ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಏನು ಪ್ರಯೋಜನ? ಇಲ್ಲಿ ನೀವು ಮಹಾರಾಷ್ಟ್ರಕ್ಕೆ ದ್ರೋಹ ಬಗೆಯುತ್ತೀರಿ, ಬಳಿಕ ಹೋಗಿ ಗಂಗೆಯಲ್ಲಿ ಮಿಂದೇಳುತ್ತೀರಿ. ಇದರಿಂದ ಯಾರ ಪಾಪವೂ ಪರಿಹಾರವಾಗದು. ಗಂಗಾ ನದಿಯಲ್ಲಿ ಸಾವಿರ ಬಾರಿ ಸ್ನಾನ ಮಾಡಿದರೂ ದ್ರೋಹಿ ಎಂಬ ಹಣೆಪಟ್ಟಿಯಿಂದ ಮುಕ್ತವಾಗಲು ಸಾಧ್ಯವಿಲ್ಲ?” ಎಂದಿದ್ದರು.