ಹುಬ್ಬಳ್ಳಿ: ಸಚಿವ ಸಂತೋಷ್ ಲಾಡ್ ಅವರು ಬಿಜೆಪಿಗೆ ಹಲವು ಪ್ರಶ್ನೆಗಳನ್ನು ಕೇಳಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ ಗೆ ಹೋಗಿದ್ದರು. ಅವರೇನು ಅಲ್ಲಿ ಕೇಕ್ ತಿನ್ನೋಕೆ ಹೋಗಿದ್ರಾ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಬಗ್ಗೆ ಮಾತನಾಡುವ ರಾಜ್ಯ ಬಿಜೆಪಿಗರು ಪ್ರಧಾನಿ ಅವರನ್ನು ಯಾಕೆ ಪ್ರಶ್ನಿಸುವುದಿಲ್ಲ. ಅವರೇಕೆ ಪಾಕಿಸ್ತಾನಕ್ಕೆ ಹೋಗಿದ್ದರು? ಅವರಿಗೆ ಯಾರಾದರೂ ಆಮಂತ್ರಣ ನೀಡಿದ್ದರಾ? ಎಂದು ಪ್ರಶ್ನಿಸಿದ್ದಾರೆ.
ವಕ್ಫ್ ವಿಚಾರದಲ್ಲಿ ಈಗಾಗಲೇ ಹಿಂದಿನ ಎಲ್ಲ ಸರ್ಕಾರಗಳು ಕೂಡ ನೋಟಿಸ್ ನೀಡಿವೆ. ಇದರ ಬಗ್ಗೆ ಬಿಜೆಪಿ ಈಗ ಮಾತನಾಡುತ್ತಿದೆ. ಆದರೆ, ಹಿಂದೆ ತನ್ನ ಅವಧಿಯಲ್ಲಿ ಕೊಟ್ಟಿರುವ ನೋಟಿಸ್ ಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಅವರ ಕಾಲದಲ್ಲಿ, ನಮ್ಮ ಕಾಲದಲ್ಲಿ ಎಷ್ಟು ನೋಟಸ್ ಆಗಿವೆ, ಇದರ ಬಗ್ಗೆ ಸರ್ಕಾರ ಆದಷ್ಟು ಬೇಗ ಉತ್ತರ ನೀಡುತ್ತದೆ. ಈ ವಿಷಯವನ್ನು ಬಿಜೆಪಿಯು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿತ್ತು. ಆದರೆ, ಜನರಿಗೆ, ರೈತರಿಗೆ ಇದು ಗೊತ್ತು. ಹೀಗಾಗಿ ಅದು ಕ್ಲಿಕ್ ಆಗಲಿಲ್ಲ. ಇವರಿಗೆ ಜನರ ಬಗ್ಗೆ ಕಾಳಜಿ, ಅನುಕಂಪ ಇಲ್ಲ. ಬರೀ ಪ್ರತಿಯೊಂದು ವಿಷಯದಲ್ಲಿ ರಾಜಕಾರಣ ಮಾಡುವುದು ಮಾತ್ರ ಗೊತ್ತಿದೆ ಎಂದು ಗುಡುಗಿದ್ದಾರೆ.
ಈ ವೇಳೆ ಡಿಕೆಶಿ ಹಾಗೂ ಸಿಎಂ ಬಣ ರಾಜಕೀಯ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಬದಲಾವಣೆ ಈಗ ಅಪ್ರಸ್ತುತ. ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಸಂಪುಟ ವಿಸ್ತರಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.