ಬೆಂಗಳೂರು: ಯಾದಗಿರಿಯ ಪಿಎಸ್ ಐ ಪರಶುರಾಮ್ ಸಂಶಯಾಸ್ಪದ ಸಾವಿನ ಬೆನ್ನಲ್ಲೇ ಸಿಸಿಬಿ ಇನ್ಸ್ಪೆಕ್ಟರ್ ತಿಮ್ಮೆಗೌಡ ಆತ್ಮಹತ್ಯೆಗೆ ಶರಣಾಗಿದ್ದು, ಪೊಲೀಸ್ ಇಲಾಖೆ ಬೆಚ್ಚಿ ಬೀಳುವಂತೆ ಮಾಡಿದೆ. ಸದ್ಯ ಈ ಕುರಿತು ತನಿಖೆ ನಡೆದಿದೆ.
ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಇನ್ಸ್ ಪೆಕ್ಟರ್ ತಿಮ್ಮೇಗೌಡ ರಾಮನಗರ ಜಿಲ್ಲೆಯ ಬಿಡದಿಯ ಕಗ್ಗಲಿಪುರದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಾವು ಕೂಡ ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಆತ್ಮಹತ್ಯೆ ವೈಯಕ್ತಿಕ ಕಾರಣಕ್ಕೋ? ಅಥವಾ ಕೆಲಸದ ಒತ್ತಡಕ್ಕೋ? ಎಂಬುವುದು ಗೊತ್ತಾಗಿಲ್ಲ.
1998ರ ಬ್ಯಾಚ್ ನ ಪೊಲೀಸ್ ಅಧಿಕಾರಿಯಾದ ತಿಮ್ಮೇಗೌಡ ಸದ್ಯ ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ.
ಸಿಸಿಬಿಯಲ್ಲಿ ಇತ್ತೀಚೆಗೆ ಹೈಪ್ರೊಫೈಲ್ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು..ಅದರ ತನಿಕಾಧಿಕಾರಿಯಾಗಿದ್ದ ತಿಮ್ಮೇಗೌಡರಿಗೆ ಆರೋಪಿಗಳನ್ನು ಬಂಧಿಸಿದ್ದ ವಿಚಾರಕ್ಕೆ ಒತ್ತಡಗಳು ಇತ್ತು ಎಂಬ ಆರೋಪವೊಂದು ಕೇಳಿ ಬಂದಿದೆ. 2004 ರಲ್ಲಿ ಹಾಸನದಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದಾಗ ತಿಮ್ಮೆಗೌಡರ ಮೇಲೆ ಅತ್ಯಾಚಾರ ಪ್ರಕರಣ ಕೂಡ ದಾಖಲಾಗಿತ್ತು. ಸಂತ್ರಸ್ಥೆಗೆ ಮಗು ಕೂಡ ಜನಿಸಿದ್ದು ತಿಮ್ಮೇಗೌಡರ ಡಿಎನ್ ಎ ಮ್ಯಾಚ್ ಆಗಿತ್ತು. ಆ ವಿಚಾರವಾಗಿ ಕೇಸ್ ನ್ಯಾಯಾಲಯದಲ್ಲಿ ಕಮಿಟ್ ಆಗಿದ್ದು, ಆಗಸ್ಟ್ 31 ಕ್ಕೆ ವಿಚಾರಣೆ ದಿನಾಂಕ ಕೂಡ ನಿಗದಿಯಾಗಿತ್ತು..ಈ ವಿಚಾರವಾಗಿಯು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬ ವಿಷಯ ಕೂಡ ಬಹಿರಂಗವಾಗಿದೆ.
ಅತ್ತಿಬೆಲೆ ಪಟಾಕಿ ದುರಂತ ಸಂಭವಿಸಿದಾಗ ಅತ್ತಿಬೆಲೆ ಠಾಣೆ ಇನ್ಸ್ ಪೆಕ್ಟರ್ ಆಗಿದ್ದಿದ್ದು ಕೂಡ ಇದೇ ತಿಮ್ಮೇಗೌಡ. ಆಗ ಇವರು ಅಮಾನತ್ತಾಗಿದ್ದರು. ಹೀಗಾಗಿಯೇ ತಿಮ್ಮೆಗೌಡರ ಸಾವು ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ತನಿಖೆಯ ನಂತರ ಇದರ ಸತ್ಯಾಂಶ ಹೊರಬರಬೇಕಿದೆ.