ಮುಂಬೈ: ದೇಶದ ಅಭಿವೃದ್ಧಿಗಾಗಿ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ನೀಡಿದ ಹೇಳಿಕೆಯು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಇದರ ಕುರಿತು ಶಾರ್ಕ್ ಟ್ಯಾಂಕ್ ಇಂಡಿಯಾ ರಿಯಾಲಿಟಿ ಶೋ ಜಡ್ಜ್, ಎಮ್ ಕ್ಯೂರ್ ಫಾರ್ಮಾಸುಟಿಕಲ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೂಡ ಆಗಿರುವ ನಮಿತಾ ಥಾಪರ್ (Namita Thapar) ಅವರು ಈ ಕುರಿತು ಮಾತನಾಡಿದ್ದಾರೆ. “ವಾರಕ್ಕೆ 70-90 ಗಂಟೆ ದುಡಿಯುವವರು ಮಕ್ಕಳನ್ನೇ ಮಾಡಿಕೊಳ್ಳಬಾರದು” ಎಂದಿದ್ದಾರೆ.
ನೆಟ್ ಫ್ಲಿಕ್ಸ್ ಒಟಿಟಿ ಪ್ಲಾಟ್ ಫಾರ್ಮ್ ನ ಅಡೋಲ್ ಸೀನ್ ಕಾರ್ಯಕ್ರಮದಲ್ಲಿ ನಮಿತಾ ಥಾಪರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಕ್ಕಳ ಪಾಲನೆ-ಪೋಷಣೆ ಕುರಿತು ಅವರು ಮಾತನಾಡಿದ್ದಾರೆ. “ಮಕ್ಕಳು ಸೂಕ್ಷ್ಮ ಮನಸ್ಸನ್ನು ಹೊಂದಿರುತ್ತಾರೆ. ಅವರಿಗೆ ಪೋಷಕರೇ ಸರ್ವಸ್ವ ಆಗಿರುತ್ತಾರೆ. ಅಂತಹ ಮಕ್ಕಳನ್ನು ಪೋಷಕರು ನೋಡಿಕೊಳ್ಳದಿದ್ದರೆ ಅವರಿಗೆ ನಾಚಿಕೆಯಾಗಬೇಕು” ಎಂದು ಹೇಳಿದ್ದಾರೆ.
“ಪೋಷಕರು ಮಕ್ಕಳಿಗೆ ಸೌಕರ್ಯಗಳನ್ನು ನೀಡುವ ಜತೆಗೆ ಅವರ ಜತೆ ಭಾವನಾತ್ಮಕವಾಗಿ ಬೆರೆಯಬೇಕು. ಅವರ ಭಾವನೆಗಳಿಗೆ ಸ್ಪಂದಿಸಬೇಕು ಹಾಗೂ ಸಮಯ ಕೊಡಬೇಕು. ಮಕ್ಕಳೊಂದಿಗೆ ನಿರಂತವಾಗಿ ಸಂವಹನ ಸಾಧಿಸಬೇಕು. ಮಕ್ಕಳ ಜತೆ ಪೋಷಕರು ಎಂದಿಗೂ ನಿಲ್ಲಬೇಕು. ಅವರ ಬೇಕು-ಬೇಡಗಳಿಗೆ ಸ್ಪಂದಿಸಬೇಕು. ನೀವು ಮಕ್ಕಳಿಗೆ ಕೊಡುವ ಅದ್ಭುತ ಉಡುಗೊರೆ ಎಂದರೆ, ಅವರಲ್ಲಿ ಆತ್ಮವಿಶ್ವಾಸ ಬೆಳೆಸುವುದು. ಪ್ರತಿ ಪೋಷಕರೂ ಹೀಗೆ ಮಾಡಬೇಕು” ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ವಾರಕ್ಕೆ 70-90 ಗಂಟೆ ಕೆಲಸ ಮಾಡುವವರು ಮಾಡಲಿ. ಆದರೆ, ಅಂತಹವರು ಮಕ್ಕಳನ್ನು ಹೊಂದಬಾರದು. ಜಗತ್ತಿಗೆ ಗಂಡ-ಹೆಂಡತಿಯು ಒಂದು ಮಗುವನ್ನು ಪರಿಚಯಿಸಬೇಕು ಎಂದು ತೀರ್ಮಾನಿಸಿದ್ದರೆ, ಮೊದಲು ಅವರು ಆ ಮಗುವಿಗೆ ಸಮಯ ಕೊಡಲು ಸಿದ್ಧರಿರಬೇಕು. ಸಮಯ ಕೊಡಲು ಆಗುವುದಿಲ್ಲ ಎಂದರೆ ಮಕ್ಕಳನ್ನೇ ಹೊಂದಬಾರದು. ಮಗು ಬೇಕು ಎಂದರೆ 70 ಗಂಟೆ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಇದಿಷ್ಟೇ ನನ್ನ ವಾದ” ಎಂದಿದ್ದಾರೆ.