ಬೆಂಗಳೂರು: ಕರ್ನಾಟಕದ ಮಗ್ಗುಲಲ್ಲೇ ಇರುವ ತಮಿಳುನಾಡು ನಿಜಕ್ಕೂ ಸದಾ ರಾಜಕೀಯ ಸಂಚಲನಗಳಿಂದಲೇ ಸದ್ದು ಮಾಡಿದ ರಾಜ್ಯ. ಕಾವೇರಿ ವಿವಾದದಿಂದ ಆರಂಭವಾಗುವ ತಮಿಳುನಾಡಿನೊಟ್ಟಿಗಿನ ಕರುನಾಡಿನ ಬಾಂಧವ್ಯ ಅಲ್ಲಿನ ರಾಜಕೀಯದಲ್ಲೂ ಅವಿನಾಭಾವವಾಗಿರುವುದು ಸುಳ್ಳಲ್ಲ. ಹಿಂದೆ ಸಿಎಂ ಆಗಿದ್ದ ದಿವಂಗತ ಜೆ. ಜಯಲಲಿತಾ ಕನ್ನಡಿಗರು ಎನ್ನುವುದು ಗಮನಾರ್ಹ. ವಿಶೇಷ ಎನ್ನುವಂತೆ ಈಗ ಇದೇ ಕನ್ನಡ ಮಣ್ಣಿನೊಂದಿಗೆ ನಂಟು ಹೊಂದಿರುವ ಮತ್ತೋರ್ವ ನಾಯಕ ತಮಿಳು ನೆಲದಲ್ಲಿ ಇನ್ನಿಲ್ಲದ ಸದ್ದು ಮಾಡುತ್ತಿದ್ದಾರೆ. ಅದು ಬೇರಾರು ಅಲ್ಲಾ ಮಾಜಿ ಕಾಪ್ ಅಣ್ಣಾಮಲೈ.
2020ರ ವೇಳೆಗೆ ಕರ್ನಾಟಕದಲ್ಲಿ ಪೊಲೀಸ್ ಸೇವೆಯಲ್ಲಿದ್ದ ಅಣ್ಣಾಮಲೈ ದಿಢೀರ್ ತಮ್ಮ ವೃತ್ತಿಗೆ ಗುಡ್ ಬೈ ಹೇಳಿ ಕೊರಳಿಗೆ ಕೇಸರಿ ಶಾಲು ಹಾಕಿಕೊಂಡು ರಾಜಕೀಯ ರಂಗ ಪ್ರವೇಶಿಸಿದರು. ಇದಾಗಿ ಸರಿಯಾಗಿ 5 ವರ್ಷಗಳು ಗತಿಸಿವೆ. ಚುನಾವಣೆಗಳು ನಡೆದಿವೆ. ಸರ್ಕಾರಗಳು ಬದಲಾಗಿವೆ. ಆದರೆ ಅಣ್ಣಾಮಲೈ ಅದೃಷ್ಠ ಮಾತ್ರ ಬದಲಾಗಲೇ ಇಲ್ಲಾ.

ರಾಜ್ಯ ಬಿಜೆಪಿ ಘಟಕ ಅಧ್ಯಕ್ಷರಾಗಿದ್ದ ಅಣ್ಣಾಮಲೈ ದಿಢೀರ್ ಬೆಳವಣಿಗೆಯಲ್ಲಿ ಸ್ಥಾನ ತ್ಯಜಿಸಿದ್ದಾರೆ. ಇದಕ್ಕೆ ಮೂಲ ಕಾರಣ ಎಐಎಡಿಎಂಕೆ ಜೊತೆಗಿನ ಮೈತ್ರಿ. ಹಾಗೆ ನೋಡಿದರೆ ಕಳೆದ ಲೋಕಸಭಾ ಚುನಾವಣೆಗೂ ಮುನ್ನವೇ ಅಣ್ಣಾಮಲೈ ತಮಿಳುನಾಡಿನ ಯುವಕರನ್ನೇ ಟಾರ್ಗೆಟ್ ಮಾಡಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಪಕ್ಷ ಸಂಘಟಿಸಿದ್ದರು.
ಇದರ ಪರಿಣಾಮವೇ ತಮಿಳುನಾಡಿನಲ್ಲಿ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಎರಡಂಕಿ ವೋಟ್ ಶೇರ್ ಗಿಟ್ಟಿಸಿತ್ತು. ಅಷ್ಟೇ ಅಲ್ಲಾ ಗ್ರಾಮೀಣ ಭಾಗದಲ್ಲೂ ತನ್ನದೇ ಆದ ತಳಮಟ್ಟದ ಸಂಘಟನೆಗೂ ಕೂಡಾ ಬಲ ನೀಡಿದರು.
ತಮಿಳುನಾಡಿನು ರಾಜಕೀಯದಲ್ಲಿ ತನ್ನದೇ ಆದ ಜಾತಿ ಸಮೀಕರಣವೊಂದು ದಶಕಗಳಿಂದಲೂ ನಡೆದೇ ಬಂದಿದೆ. ಹಾಗೆ ನೋಡಿದರೆ ಎಐಎಡಿಎಂಕೆ ಜೊತೆಗಿನ ಮೈತ್ರಿ ಬೆನ್ನಲ್ಲೇ ಅಣ್ಣಾಮಲೈ ತಲೆದಂಡ ಅನ್ನೋ ಚರ್ಚೆ ಶುರುವಾಗಿತ್ತು. ಅದಕ್ಕೆ ಕಾರಣವೂ ಇದೆ. ಎಐಎಡಿಎಂಕೆಯ ಸಾರಥಿ ಪಳನಿಸ್ವಾನಿ ಹಾಗೂ ಅಣ್ಣಾಮಲೈ ಇಬ್ಬರೂ ಪ್ರಬಲ ಗೌಂಡರ್ ಸಮುದಾಯಕ್ಕೆ ಸೇರಿದವರು.

ಅಷ್ಟೇ ಅಲ್ಲಾ ಒಂದೇ ಪ್ರಾಂತವ್ಯವನ್ನು ಪ್ರತಿನಿಧಿಸಿರುವವರು. ಹೀಗಾಗಿಯೇ ಅಮಿತ್ ಶಾ ಅಣ್ಣಾಮಲೈ ಜಾಗಕ್ಕೆ ತಮಿಳುನಾಡಿನ ಹಿಂದುಳಿದ ದೇವರ್ ಸಮುದಾಯ ನೈಸಾರ್ ನಾಗೇಂದ್ರರಿಗೆ ಪಟ್ಟಕಟ್ಟಿ ತಮಿಳುನಾಡಿಲ್ಲಿ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ತರುವ ಯತ್ನ ಮಾಡುತ್ತಿದ್ದಾರೆ. ಉಳಿದಂತೆ ಎಲ್. ಮುರುಗನ್, ತಮಿಳಿಸೈ ಸೌಂದರರಾಜನ್ ಹೆಸರುಗಳೂ ಮುಂಚೂಣಿಯಲ್ಲಿವೆ.
ಎಐಎಡಿಕೆಯ ಪನ್ನಿರ್ ಸೆಲ್ವಂ ಹಾಗೂ ಅಣ್ಣಾಮಲೈ ನಡುವಿನ ಸಂಬಂಧ ಹಾವು-ಮುಂಗುಸಿಯಂಥದ್ದು. ಜಯಲಲಿತಾ ಹೆಸರು ಪ್ರಸ್ತಾಪಿಸಿದ್ದ ಅಣ್ಣಾಮಲೈ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಸಮರ ಎನ್ನುವ ಹೆಸರಿನಲ್ಲಿ ಎಐಎಡಿಎಂಕೆ ನಾಯಕರ ವಿರುದ್ಧ ಟೀಕಾಸ್ತ್ರಗಳನ್ನೇ ಸಿಡಿಸಿದರು. ಅತ್ಯಂತ ನಿಷ್ಠುರ ಮಾತುಗಳು, ಅತ್ಯುತ್ಸಾಹದ ನಡೆಯಿಂದಲೇ ಅಣ್ಣಾಮಲೈ ಹಲವು ಪ್ರಮಾದಗಳನ್ನು ಮಾಡಿಕೊಂಡಿದ್ದೂ ಸುಳ್ಳಲ್ಲ. ಇದೇ ಕಾರಣಕ್ಕೆ ಮೊನ್ನೆ ಮಾರ್ಚ್ 25ರಂದು ಅಮಿತ್ ಶಾ ಭೇಟಿ ಮಾಡಿದ್ದ ಪಳನಿಸ್ವಾಮಿ ಮೈತ್ರಿ ಓಕೆ ಆದರೆ, ಅಣ್ಣಾಮಲೈ ಸಾರಥ್ಯ ಬಿಲ್ ಕುಲ್ ಒಪ್ಪೋದಿಲ್ಲ ಎಂದು ಶರಾ ಬರೆದು ಬಿಟ್ಟರು.

ಹೀಗಾಗಿ ಅನಿವಾರ್ಯವಾಗಿ ಅಣ್ಣಾಮಲೈ ಜಾಗಕ್ಕೆ ಈಗ ಹೊಸ ಮುಖದ ಶೋಧ ಆರಂಭಿಸಿದ್ದಾರೆ ಅಮಿತ್ ಶಾ. ನರೇಂದ್ರ ಮೋದಿ ಪಾಲಿನ ನೀಲಿಗಟ್ಟಿನ ಹುಡುಗ ಅಂದರೆ, ಅದು ಅಣ್ಣಾಮಲೈ. ದೇಶಕ್ಕಾಗಿ ಅಣ್ಣಾಮಲೈ ಅಂತಾ ಮೋದಿ ಖುದ್ದು ಈ ಹಿಂದೆ ಹಾಡಿ ಹೊಗಳಿದ್ದು ಸುಳ್ಳಲ್ಲ. ಮೈತ್ರಿ ಧರ್ಮಪಾಲನೆಗೆ ಅಣ್ಣಾಮಲೈ ಪದಚ್ಯುತಿ ಆಗಿರಬಹುದು. ಆದರೆ, ಅಣ್ಣಾಮಲೈ ಕಳೆದ 5 ವರ್ಷದಲ್ಲಿ ತಮಿಳುನಾಡಿನ ಉದ್ದಗಲಕ್ಕೂ ಬಿಜೆಪಿಯನ್ನು ಸಂಘಟಿಸಿದ ಪರಿ ಮೋದಿ ಪಾಲಿಗೂ ಅದ್ಭುತ ಸಾಧನೆಯೇ ಸರಿ.
ಈಗಾಗಲೇ ಯುವಕರು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬಿಜೆಪಿ ನಿಧಾನಕ್ಕೆ ತನ್ನ ನೆಲೆ ಕಂಡುಕೊಳ್ಳುತ್ತಿದೆ.ಸೇಲಂ, ಮಧುರೈ, ಈರೋಡು ವ್ಯಾಪ್ತಿಯಲ್ಲಿ ಅಣ್ಣಾಮಲೈ ಹವಾ ಸೃಷ್ಟಿಯಾಗಿದೆ. ಭವಿಷ್ಯದಲ್ಲಿ ಅಣ್ಣಾಮಲೈ ಬಿಜೆಪಿಯ ಬಲುದೊಡ್ಡ ಆಸ್ತಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಅಣ್ಣಾಮಲೈರನ್ನು ಕೇಂದ್ರ ಸಂಪುಟದಲ್ಲಿ ಉತ್ತಮ ಖಾತೆ ನೀಡಿ ಗೌರವಿಸುವ ಇರಾದೆ ಪಕ್ಷದ ಮುಂದಿದೆ. ಅಷ್ಟೇ ಅಲ್ಲಾ ಕರ್ನಾಟಕದಲ್ಲೂ ತಮ್ಮದೇ ಆದ ಛಾಪು ಮೂಡಿಸಿರೋ ಅಣ್ಣಾಮಲೈರನ್ನು ಕರುನಾಡ ರಾಜಕೀಯಕ್ಕೆ ಕರತರುವ ಗುಸುಗುಸು ಕೂಡಾ ಕೇಸರಿ ಪಡಸಾಲೆಯಲ್ಲೇ ಓಡಾಡ್ತಿದೆ.

ಆದರೆ, ನನಗ್ಯಾವ ಹುದ್ದೆ ಬೇಡ ನಾನು ತಮಿಳುನಾಡಿನಲ್ಲೇ ಪಕ್ಷ ಸಂಘಟಿಸುತ್ತೇನೆ ಅಂತಾ ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ. ಆದರೆ, ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಂಘಟಿಸಬೇಕಿದೆ. ಎಐಎಡಿಎಂಕೆ ನಿಜಕ್ಕೂಬಿಜೆಪಿಗಿಂದು ಅನಿವಾರ್ಯ. ಆದರೆ, ಎಐಎಡಿಎಂಕೆ ಹೆಗಲ ಮೇಲೆ ಬಂದೂಕಿಟ್ಟು ತನ್ನದೇ ಆದ ಪಕ್ಷ ಸಂಘಟನೆ ಕಾರ್ಯವನ್ನೂ ಬಿಜೆಪಿ ನಡೆಸಿದೆ. ಇದರ ಫಲ ನಿಜಕ್ಕೂ ಮುಂದಿನ ವರ್ಷದ ಚುನಾವಣಾ ಫಲಿತಾಂಶವೇ ನೀಡಬೇಕಿದೆ. ಆದರೆ, ಇದರ ನಡುವೆ ತಮಿಳುನಾಡಲ್ಲಿ ಕೇಸರಿ ಪಕ್ಷಕ್ಕೊಂದು ನೆಲೆ ಕಲ್ಪಿಸಿಕೊಟ್ಟ ಅಣ್ಣಾಮಲೈ ರಾಜಕೀಯ ಭವಿಷ್ಯವೂ ಅಷ್ಟೇ ಕುತೂಹಲಕಾರಿಯಾಗಿದೆ.