ಬೆಂಗಳೂರು: ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಇಎಲ್ ಲೇಔಟ್‌ನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದ್ದು, ಪ್ರಾಣ ಸ್ನೇಹಿತನ ಮನೆಯಲ್ಲೇ ದರೋಡೆ ಮಾಡಿಸಿದ ಸ್ಟಾಂಪ್ ವೆಂಡರ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬೆಟ್ಟೇಗೌಡ (52) ಎಂದು ಗುರುತಿಸಲಾಗಿದೆ. ಈತ ಸ್ಟಾಂಪ್ ವೆಂಡರ್ ಆಗಿ ಕೆಲಸ ಮಾಡುತ್ತಿದ್ದನು. ತನ್ನ ಸ್ನೇಹಿತ ಹೊಂಬೇಗೌಡ ಮನೆಯಲ್ಲೇ ದರೋಡೆ ಮಾಡಿಸುವ ಯೋಜನೆ ರೂಪಿಸಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಮಾಹಿತಿ ಪ್ರಕಾರ, ಹೊಂಬೇಗೌಡ ಇತ್ತೀಚೆಗೆ ಸೈಟ್ ಮಾರಾಟ ಮಾಡಿದ್ದು, ಅದರಿಂದ ಮನೆದಲ್ಲಿ ಹೆಚ್ಚಿನ ಹಣ ಇದೆ ಎಂದು ತಿಳಿದ ಬೆಟ್ಟೇಗೌಡ ದರೋಡೆಗೆ ಸಂಚು ರೂಪಿಸಿದ್ದಾನೆ. ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ನಾಗೇಂದ್ರನಿಗೆ ಕರೆ ಮಾಡಿ ಈ ವಿಷಯ ತಿಳಿಸಿ, ಹೊಂಬೇಗೌಡ ಮನೆಗೆ ದರೋಡೆ ಮಾಡಲು ಸೂಚನೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕಾಗಿ ನಾಗೇಂದ್ರ ಶಿವಾಜಿನಗರದಲ್ಲಿ ಶೂಟಿಂಗ್‌ಗೆ ಬಳಸುವ ಸಬ್ ಇನ್ಸ್‌ಪೆಕ್ಟರ್ ಯೂನಿಫಾರ್ಮ್ ಅನ್ನು ಬಾಡಿಗೆಗೆ ಪಡೆದು, ನಕಲಿ ಪೊಲೀಸ್ ವೇಷದಲ್ಲಿ ಹೊಂಬೇಗೌಡ ಮನೆಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ದರೋಡೆ ಮಾಡಿದ್ದಾನೆ.
ಈ ಪ್ರಕರಣದಲ್ಲಿ ಈಗಾಗಲೇ ನಾಗೇಂದ್ರ ಮತ್ತು ಬಚ್ಚನ್ ಎಂಬ ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ದರೋಡೆಗೆ ಐಡಿಯಾ ನೀಡಿದ್ದ ಸ್ಟಾಂಪ್ ವೆಂಡರ್ ಬೆಟ್ಟೇಗೌಡನನ್ನೂ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಬಂಧಿತರಿಂದ 570 ಗ್ರಾಂ ಚಿನ್ನಾಭರಣ ಹಾಗೂ 14 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಬೈಕ್ ವಿಚಾರಕ್ಕೆ ಗಲಾಟೆ | ಪ್ರೇಯಸಿ ಸೇರಿ ಮೂವರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುರುಳ



















