ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಮನು ಭಾಕರ್ ಕಂಚು ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ತಂದು ಕೊಟ್ಟಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಶೂಟಿಂಗ್ ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಸ್ಪರ್ಧಿ ಎಂಬ ದಾಖಲೆ ಬರೆದಿದ್ದಾರೆ. ಈ ಮೂಲಕ ಕಳೆದ ಬಾರಿಯ ನೋವಿಗೆ ಸೇಡು ತೀರಿಸಿಕೊಂಡಿದ್ದಾರೆ.
ಕಳೆದ ಬಾರಿ ಮನು ಭಾಕರ್ ತಮ್ಮ ಪಿಸ್ತೂಲಿನಲ್ಲಿ ಕಂಡುಬಂದ ದೋಷದಿಂದಾಗಿ ಪದಕದ ರೇಸ್ ನಿಂದ ಹೊರಗೆ ಬಿದ್ದಿದ್ದರು. ಆದರೆ, ಈ ಬಾರಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಮನು ಭಾಕರ್ ಹರಿಯಾಣ ಮೂಲದವರು. ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು.
ಮನು ಭಾಕರ್ 14 ವರ್ಷದವರಿದ್ದಾಗ ಶೂಟಿಂಗ್ ಕಲಿಯಲು ಆರಂಭಿಸಿದ್ದರು. 2017ರಲ್ಲಿ ಮನು ಭಾಕರ್ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ 10 ಮೀಟರ್ ಏರ್ ಪಿಸ್ತೂಲ್ ನ ಫೈನಲ್ ನಲ್ಲಿ ಒಲಿಂಪಿಯನ್ ಮತ್ತು ಮಾಜಿ ವಿಶ್ವದ ನಂ-1 ಆಟಗಾರ್ತಿ ಹೀನಾ ಸಿಧುರನ್ನು ಸೋಲಿಸಿ ಚಿನ್ನಕ್ಕೆ ಮುತ್ತಿಕ್ಕಿದ್ದರು. 2017 ರಲ್ಲಿ ಏಷ್ಯನ್ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದರು.
ಆನಂತರ ಮೆಕ್ಸಿಕೋದ ಗ್ವಾಡಲಜಾರಾದಲ್ಲಿ ನಡೆದ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಶೂಟಿಂಗ್ ಫೆಡರೇಶನ್ ವಿಶ್ವಕಪ್ ನಲ್ಲಿ ಆಡಿದ ತಮ್ಮ ಚೊಚ್ಚಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ್ದರು. 10 ಮೀಟರ್ ಏರ್ ಪಿಸ್ತೂಲ್ ನ ಮಹಿಳೆಯರ ಫೈನಲ್ ನಲ್ಲಿ, ಒಲಿಂಪಿಕ್ ಚಿನ್ನದ ಪದಕ ವಿಜೇತೆ ಮತ್ತು ವಿಶ್ವಕಪ್ ವಿಜೇತೆ ಸೋಲಿಸಿದ ಸಾಧನೆ ಮಾಡಿದ್ದಾರೆ. ಮನು ಕೇವಲ 16 ನೇ ವಯಸ್ಸಿನಲ್ಲಿ, ಅವರು ISSF ವಿಶ್ವಕಪ್ ನಲ್ಲಿ ಚಿನ್ನದ ಪದಕ ಗೆದ್ದ ಅತ್ಯಂತ ಕಿರಿಯ ಭಾರತೀಯ ಆಟಗಾರ್ತಿ ಎಂಬ ದಾಖಲೆ ಮಾಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮನು ಭಾಕರ್ ಅವರ ಪಿಸ್ತೂಲ್, ಸ್ಪರ್ಧೆ ನಡೆಯುವ ಸಮಯದಲ್ಲೇ ಕೈಕೊಟ್ಟಿತ್ತು. ಹೀಗಾಗಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ 20 ನಿಮಿಷಗಳ ಸಮಯವನ್ನು ಕಳೆದುಕೊಳ್ಳಬೇಕಾಯಿತು. ಹೀಗಾಗಿ ಅವರು 55 ನಿಮಿಷಗಳಲ್ಲಿ 44 ಶಾಟ್ ಗಳನ್ನು ಮಾಡಬೇಕಿತ್ತು. ಪಿಸ್ತೂಲ್ ಸರಿ ಹೋದ ನಂತರ ಫೈರಿಂಗ್ ಪಾಯಿಂಟ್ ಗೆ ಮರಳಿದರಾದರೂ ಸಮಯ ಹೆಚ್ಚಾಗಿತ್ತು. ಹೀಗಾಗಿ ಫೈನಲ್ ರೇಸ್ ನಿಂದ ಹೊರಗೆ ಉಳಿದರು.