ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ಸತತ ಮೂರನೇ ಸೋಲಿನ ಆಘಾತ ಅನುಭವಿಸಿದೆ. ಇದರ ನಡುವೆ, ತಂಡದ ಬಹುನಿರೀಕ್ಷಿತ ಸ್ಟಾರ್ ಆಟಗಾರ, ಟಿ20 ವಿಶ್ವಕಪ್ ಹೀರೊ ಸಂಜು ಸ್ಯಾಮ್ಸನ್ ಅವರ ಕಳಪೆ ಫಾರ್ಮ್ ಸಿಎಸ್‌ಕೆ ಪಾಳೆಯದಲ್ಲಿ ಆತಂಕ ಮೂಡಿಸಿದೆ.
ಭಾನುವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಪಂದ್ಯದಲ್ಲೂ 251 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದ ಸಿಎಸ್‌ಕೆ ಪರ ಸ್ಯಾಮ್ಸನ್ ಮತ್ತೊಮ್ಮೆ ಕೇವಲ ಒಂದಂಕಿ ಮೊತ್ತಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಈ ಬಗ್ಗೆ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಸ್‌ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್, ಸ್ಯಾಮ್ಸನ್ ಅವರ ಕಳಪೆ ಪ್ರದರ್ಶನವನ್ನು ಸಮರ್ಥಿಸಿಕೊಂಡಿದ್ದು, ಅವರು ಇನ್ನು ಹೊಸ ತಂಡಕ್ಕೆ ಹೊಂದಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಸ್ಯಾಮ್ಸನ್ ಮೇಲೇಕೆ ಇಷ್ಟೊಂದು ನಿರೀಕ್ಷೆ?
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದ ಸಂಜು ಸ್ಯಾಮ್ಸನ್ ಅವರನ್ನು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಭಾರಿ ಲೆಕ್ಕಾಚಾರದೊಂದಿಗೆ ತಂಡಕ್ಕೆ ಕರೆತಂದಿತ್ತು. ಎಂ.ಎಸ್. ಧೋನಿ ಅವರ ದೀರ್ಘಕಾಲೀನ ಬದಲಿ ಆಟಗಾರನಾಗಿ ಸ್ಯಾಮ್ಸನ್ ಅವರನ್ನು ನೋಡಲಾಗುತ್ತಿತ್ತು. ಇದಕ್ಕಾಗಿ ಸಿಎಸ್‌ಕೆ ತನ್ನ ಪ್ರಮುಖ ಆಟಗಾರರಾದ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರನ್ನು ಕೈಬಿಟ್ಟು ಈ ಬಹುದೊಡ್ಡ ಟ್ರೇಡ್ (trade) ಮಾಡಿತ್ತು. ಕೇವಲ ಒಂದು ತಿಂಗಳ ಹಿಂದಷ್ಟೇ ಮುಕ್ತಾಯಗೊಂಡಿದ್ದ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸ್ಯಾಮ್ಸನ್, ಐಪಿಎಲ್‌ನ ಆರಂಭಿಕ ಮೂರೂ ಪಂದ್ಯಗಳಲ್ಲಿ ಹೊಸ ಚೆಂಡನ್ನು ಎದುರಿಸಲು ಪರದಾಡಿದ್ದಾರೆ. ಇದು ಅಭಿಮಾನಿಗಳಲ್ಲಿ ಹಾಗೂ ಕ್ರಿಕೆಟ್ ಪಂಡಿತರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವ ಸವಾಲು
2013ರಲ್ಲಿ ರಾಜಸ್ಥಾನ್ ರಾಯಲ್ಸ್ ಮೂಲಕ ಐಪಿಎಲ್ ಪ್ರವೇಶಿಸಿದ್ದ ಸ್ಯಾಮ್ಸನ್, ಆ ತಂಡದ ನಾಯಕರಾಗುವ ಹಂತಕ್ಕೆ ಬೆಳೆದಿದ್ದರು. ಹೀಗೆ ದೀರ್ಘಕಾಲ ಒಂದೇ ಫ್ರಾಂಚೈಸಿಯಲ್ಲಿದ್ದ ಆಟಗಾರನಿಗೆ ದಿಢೀರನೆ ಹೊಸ ತಂಡಕ್ಕೆ ಹೊಂದಿಕೊಳ್ಳುವುದು ಸುಲಭವಲ್ಲ ಎಂಬುದನ್ನು ಫ್ಲೆಮಿಂಗ್ ಒತ್ತಿ ಹೇಳಿದ್ದಾರೆ. “ಒಂದು ಫ್ರಾಂಚೈಸಿಯಲ್ಲಿ ದೀರ್ಘಕಾಲ ಇದ್ದು, ಹೊಸ ತಂಡಕ್ಕೆ ಬಂದಾಗ ಅಲ್ಲಿ ಆರಾಮದಾಯಕ ಎನಿಸಿದರೂ, ‘ಇದು ನನ್ನ ತಂಡ’ ಎಂಬ ಭಾವನೆ ಮೂಡಲು ಸ್ವಲ್ಪ ಸಮಯ ಹಿಡಿಯುತ್ತದೆ. ಸದ್ಯ ನಮ್ಮ ತಂಡದಲ್ಲಿ ಐದಾರು ಬದಲಾವಣೆಗಳಾಗಿದ್ದು, ಇದು ಇನ್ನೂ ಸಂಪೂರ್ಣವಾಗಿ ಸೆಟ್ ಆಗಿಲ್ಲ. ಹೀಗಾಗಿ ಸ್ಯಾಮ್ಸನ್ ಅವರು ತಂಡದೊಂದಿಗೆ ಬೆರೆಯುವ ಪ್ರಕ್ರಿಯೆಯಲ್ಲಿದ್ದಾರೆ” ಎಂದು ಫ್ಲೆಮಿಂಗ್ ವಿವರಿಸಿದ್ದಾರೆ.
ಮೈದಾನದ ಹೊರಗೂ ನಡೆಯುತ್ತಿದೆ ಕಸರತ್ತು
ಸಂಜು ಸ್ಯಾಮ್ಸನ್ ಅವರ ಆತ್ಮವಿಶ್ವಾಸವನ್ನು ಮರಳಿ ತರಲು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಮೈದಾನದ ಹೊರಗೂ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. “ಆಟಗಾರರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ನಾವು ಮೈದಾನದ ಹೊರಗೂ ಕೆಲಸ ಮಾಡುತ್ತಿದ್ದೇವೆ. ಸ್ಯಾಮ್ಸನ್ ಚೆನ್ನಾಗಿದ್ದಾರೆ ಮತ್ತು ತಂಡದೊಂದಿಗೆ ಉತ್ತಮವಾಗಿ ಬೆರೆತಿದ್ದಾರೆ. ಋತುರಾಜ್ ಹಾಗೂ ಇತರ ಹಿರಿಯ ಆಟಗಾರರೊಂದಿಗೆ ಸೇರಿ ರನ್ ಗಳಿಸಲು ಅವರು ತುದಿಗಾಲಲ್ಲಿ ನಿಂತಿದ್ದಾರೆ. ಟಿ20 ಮಾದರಿಯಲ್ಲಿ ಗೇಮ್ ಯಾವಾಗ ಬೇಕಾದರೂ ಬದಲಾಗಬಹುದು. ಒಮ್ಮೆ ಲಯ ಕಂಡುಕೊಂಡರೆ ಸ್ಯಾಮ್ಸನ್ ಎಷ್ಟು ಅಪಾಯಕಾರಿ ಮತ್ತು ಪ್ರಾಬಲ್ಯ ಮೆರೆಯಬಲ್ಲರು ಎಂಬುದನ್ನು ನಾವು ಟಿ20 ವಿಶ್ವಕಪ್‌ನಲ್ಲಿ ನೋಡಿದ್ದೇವೆ. ಹೀಗಾಗಿ ನಮ್ಮ ಕಡೆಯಿಂದ ಅವರಿಗೆ ಸಂಪೂರ್ಣ ಬೆಂಬಲ ಮತ್ತು ವಿಶ್ವಾಸವಿದ್ದೇ ಇರುತ್ತದೆ” ಎಂದು ಕೋಚ್ ಭರವಸೆ ವ್ಯಕ್ತಪಡಿಸಿದ್ದಾರೆ.
ಆರ್‌ಸಿಬಿ ವಿರುದ್ಧ ದುಬಾರಿಯಾದ ಆ ಒಂದು ‘ನೋ ಬಾಲ್’
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಬೌಲರ್‌ಗಳು ಮೊದಲ 15 ಓವರ್‌ಗಳವರೆಗೆ ಉತ್ತಮ ನಿಯಂತ್ರಣ ಸಾಧಿಸಿದ್ದರು. ಆದರೆ ಕೊನೆಯ 5 ಓವರ್‌ಗಳಲ್ಲಿ ಬರೋಬ್ಬರಿ 97 ರನ್ ಬಿಟ್ಟುಕೊಟ್ಟರು. ವಿಶೇಷವಾಗಿ ಟಿಮ್ ಡೇವಿಡ್ ಮತ್ತು ರಜತ್ ಪಾಟಿದಾರ್ ಅವರ ಸ್ಫೋಟಕ ಬ್ಯಾಟಿಂಗ್ ಸಿಎಸ್‌ಕೆ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು. ಯುವ ವೇಗಿ ಅಂಶುಲ್ ಕಾಂಬೋಜ್ ಅವರ ಎಸೆತದಲ್ಲಿ ಡೇವಿಡ್ ಕ್ಲೀನ್ ಬೌಲ್ಡ್ ಆಗಿದ್ದರೂ, ಅದು ‘ನೋ ಬಾಲ್’ ಆಗಿದ್ದರಿಂದ ಡೇವಿಡ್ ಜೀವದಾನ ಪಡೆದರು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಫ್ಲೆಮಿಂಗ್, “ಒತ್ತಡದ ಪರಿಸ್ಥಿತಿಯಲ್ಲಿ ನಮ್ಮ ಯೋಜನೆಗಳನ್ನು ನಿಖರವಾಗಿ ಕಾರ್ಯಗತಗೊಳಿಸುವುದು ಮುಖ್ಯ. ಟಿಮ್ ಡೇವಿಡ್ ಅವರಂತಹ ಆಟಗಾರನ ಎದುರು ಸಣ್ಣ ತಪ್ಪುಗಳಿಗೂ ದೊಡ್ಡ ಬೆಲೆ ತೆರಬೇಕಾಗುತ್ತದೆ. ಆ ನೋ ಬಾಲ್‌ನಿಂದಾಗಿ ನಾವು ಸುಮಾರು 40 ರನ್‌ಗಳನ್ನು ಹೆಚ್ಚುವರಿಯಾಗಿ ನೀಡಬೇಕಾಯಿತು” ಎಂದು ವಿಷಾದಿಸಿದರು. ಸಿಎಸ್‌ಕೆ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 11ರಂದು ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯದ ವೇಳೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ತಂಡಕ್ಕೆ ಮರಳುವ ವಿಶ್ವಾಸವನ್ನು ಫ್ಲೆಮಿಂಗ್ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಅಶ್ಲೀಲ ವಿಡಿಯೋ ಇಟ್ಟುಕೊಂಡು ಲಕ್ಷ ಲಕ್ಷ ಲೂಟಿ ಮಾಡಿದ ದ್ರೋಹಿ



















