ಪಟನಾ: ಬಿಹಾರದ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಮತ್ತೊಂದು ಉದ್ಧಟತನದ ವರ್ತನೆ ತೋರಿದ್ದಾರೆ. ಹೋಳಿ ಹಬ್ಬದ ಸಂಭ್ರಮಾಚರಣೆಯ ಭರದಲ್ಲಿ ಸಿಎಂ ನಿತೀಶ್ ಕುಮಾರ್ ನಿವಾಸದ ಎದುರು ತೆರಳಿದ ತೇಜ್ ಪ್ರತಾಪ್ ಯಾದವ್, “ಪಲ್ಟು ಚಾಚಾ ಎಲ್ಲಿ” ಎಂದು ಜೋರಾಗಿ ಕೂಗುವ ಮೂಲಕ ಭಾರಿ ಟೀಕೆಗೆ ಗುರಿಯಾಗಿದ್ದಾರೆ.
ಹೋಳಿ ಸಂಭ್ರಮಾಚರಣೆಯ ಭರದಲ್ಲಿ ಹೆಲ್ಮೆಟ್ ಕೂಡ ಧರಿಸದೆ ಸ್ಕೂಟರ್ ನಲ್ಲಿ ತೇಜ್ ಪ್ರತಾಪ್ ಯಾದವ್(Tej Pratap Yadav) ಸಂಚರಿಸಿದ್ದಾರೆ. ಇದೇ ವೇಳೆ ಅವರು ನಿತೀಶ್ ಕುಮಾರ್ ನಿವಾಸದ ಎದುರು ತೆರಳಿದ್ದಾರೆ. ಪಲ್ಟು ಅಂಕಲ್ ಎಲ್ಲಿ ಎಂದು ಹಿಂದಿಯಲ್ಲಿ ಜೋರಾಗಿ ಕೂಗಿ ಉದ್ಧಟತನದ ವರ್ತನೆ ತೋರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಭಾರಿ ಟೀಕೆಗಳು ವ್ಯಕ್ತವಾಗಿವೆ.
ಪೊಲೀಸ್ ಅಧಿಕಾರಿಗೆ ಬೆದರಿಕೆ
ಬಿಹಾರದ ಪಟನಾದಲ್ಲಿರುವ ಆರ್ ಜೆಡಿ ಕಚೇರಿಯಲ್ಲಿ ಕೂಡ ಹೋಳಿ ಆಚರಿಸಲಾಗಿದೆ. ಇದೇ ವೇಳೆ ತೇಜ್ ಪ್ರತಾಪ್ ಪೊಲೀಸ್ ಅಧಿಕಾರಿಯೊಬ್ಬರಿಗೆ ನೃತ್ಯ ಮಾಡುವಂತೆ ಒತ್ತಾಯಿಸಿದ್ದಾರೆ. ‘‘ಹೇ ಸಿಪಾಯಿ, ಹೇ ದೀಪಕ್, ನಾನೊಂದು ಹಾಡು ಹಾಕುವೆ, ನೀನು ಡಾನ್ಸ್ ಮಾಡು. ಏನೂ ಚಿಂತೆ ಬೇಡ, ಇವತ್ತು ಹೋಳಿ ಹಬ್ಬ. ನೀನು ಡಾನ್ಸ್ ಮಾಡಿದರೆ ಏನೂ ಆಗುವುದಿಲ್ಲ. ಹಾಗೊಂದು ವೇಳೆ, ನೀನೇನಾದರೂ ಡಾನ್ಸ್ ಮಾಡದಿದ್ದರೆ ಸಸ್ಪೆಂಡ್ ಮಾಡಿಸುವೆ’’ ಎಂದು ಹೇಳಿರುವ ವಿಡಿಯೊ ವೈರಲ್ ಆಗಿದೆ.
ತೇಜ್ ಪ್ರತಾಪ್ ಯಾದವ್ ದರ್ಪದ ವಿಡಿಯೊ ವೈರಲ್ ಆಗುತ್ತಲೇ ಸಾರ್ವಜನಿಕರು ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಯು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘‘ಲಾಲು ಪ್ರಸಾದ್ ಯಾದವ್ ಅವರು ಬಿಹಾರ ಮುಖ್ಯಮಂತ್ರಿಯಾಗಿದ್ದಾಗ ಜಂಗಲ್ ರಾಜ್ ಆಡಳಿತದ ಮೂಲಕ ಕಾನೂನನ್ನೇ ಮನಸೋಇಚ್ಛೆ ಡಾನ್ಸ್ ಮಾಡಿದರು. ಈಗ ಅವರ ಪುತ್ರ ಪೊಲೀಸ್ ಅಧಿಕಾರಿಯಿಂದ ಡಾನ್ಸ್ ಮಾಡಿಸಿದ್ದಾರೆ. ಯಥಾ ತಂದೆ, ತಥಾ ಮಗ’’ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಕುಟುಕಿದ್ದಾರೆ.