ಬೆಂಗಳೂರು: ಇತ್ತೀಚೆಗೆ ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗಿದ್ದಾರೆ. ಈ ಮಧ್ಯೆ ಆಟೋ ದರ ಏರಿಕೆಯ ಸುದ್ದಿ ಹೊರ ಬಿದ್ದಿತ್ತು. ಆದರೆ, ಈಗ ಬೆಂಗಳೂರಿಗರು (Bengaluru) ರಿಲ್ಯಾಕ್ಸ್ ಆಗಿದ್ದಾರೆ. ಏ.1ರಿಂದ ಆಟೋ ದರ ಏರಿಕೆ (Auto Rate Hike) ಯಾಗಬಹುದು ಎನ್ನಲಾಗಿತ್ತು. ಆದರೆ, ಈಗ ಅದಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ.
ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಹೈರಾಣಾಗುತ್ತಿರುವ ಹಿನ್ನೆಲೆಯಲ್ಲಿ ಆಟೋ ದರ ಏರಿಕೆಗೆ ಜಿಲ್ಲಾಡಳಿತ ತಡೆ ನೀಡಿದೆ. ಆಟೋ ದರ ಏರಿಕೆಯ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು (Transport Department) ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಇತ್ತೀಚೆಗೆ ಸಭೆ ನಡೆಸಿತ್ತು. ಈ ವೇಳೆ ಏ. 1ರಂದು ದರ ಏರಿಕೆಯ ಕುರಿತು ಚರ್ಚಿಸಲಾಗಿತ್ತು. ಆದರೆ, ಈಗ ಜಿಲ್ಲಾಡಳಿತ ಬೆಲೆ ಏರಿಕೆಗೆ ಬ್ರೇಕ್ ಹಾಕಿದೆ. ಹೀಗಾಗಿ ಸದ್ಯಕ್ಕೆ ಆಟೋ ದರ ಏರಿಕೆ ಇಲ್ಲವಾಗಿದೆ.
ಇದರಿಂದ ಪ್ರಯಾಣಿಕರು ನಿರಾಳರಾದರೆ, ಆಟೋ ಮಾಲೀಕರು ಸಂಕಷ್ಟ ಅನುಭವಿಸುವಂತಾಗಿದೆ. ಹಿಂದೆ 2011ರಲ್ಲಿ ಆಟೋ ದರ ಪರಿಷ್ಕರಣೆ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ದರ ಏರಿಕೆಯ ಬಗ್ಗೆ ಆಟೋ ಚಾಲಕರು ಬೇಡಿಕೆ ಮುಂದಿಡುತ್ತಲೇ ಬಂದಿದ್ದಾರೆ.