ದೇಶದ ಜನರಿಗೆ ಹಾಗೂ ರೈತರಿಗೆ ಭಾರತೀಯ ಹವಾಮಾನ ಇಲಾಖೆ(IMD) ಸಿಹಿ ಸುದ್ದಿ ನೀಡಿದೆ.
ಈ ಬಾರಿ ಮೇ ತಿಂಗಳಲ್ಲಿಯೇ ಮುಂಗಾರು ಮಳೆ ದೇಶವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೈಋತ್ಯ ಮುಂಗಾರು ಮೇ 19ರೊಳಗೆ ದಕ್ಷಿಣ ಅಂಡಮಾನ್ ಸಮುದ್ರ, ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಹಾಗೂ ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ಈ ಕುರಿತು ಮಾಹಿತಿ ನೀಡಿದ್ದು, ಈ ಬಾರಿ ದೇಶಕ್ಕೆ ನೈಋತ್ಯ ಮುಂಗಾರು ಮಳೆ ಎರಡ್ಮೂರು ದಿನ ಮುಂಚಿತವಾಗಿಯೇ ಆಗಮಿಸಲಿದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ವಾಡಿಕೆಯಂತೆ ಮುಂಗಾರು ಮಳೆ ಜೂನ್ 1ರ ವೇಳೆಗೆ ಕೇರಳ ಪ್ರವೇಶಿಸುತ್ತಿತ್ತು. ನಂತರ ಅದು ಸಾಮಾನ್ಯವಾಗಿ ಉತ್ತರದ ಕಡೆಗೆ ಚಲಿಸುತ್ತದೆ. ಜುಲೈ 15ರ ವೇಳೆಗೆ ಇಡೀ ದೇಶವನ್ನೇ ಆವರಿಸುತ್ತದೆ. ಈ ವರ್ಷದಲ್ಲಿ ದೇಶದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಕೂಡ ಹವಾಮಾನ ಇಲಾಖೆ ಹೇಳಿದೆ.
ಜೂನ್ ನಿಂದ ಸೆಪ್ಟೆಂಬರ್ ಮಧ್ಯೆ ದೇಶದಲ್ಲಿ ಮುಂಗಾರು ಮಳೆಯು ಸುಮಾರು ಶೇ. 106ರಷ್ಟು ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಹಲವು ರಾಜ್ಯಗಳಲ್ಲಿ ಮಳೆಯಿಂದಾಗಿ ಹವಾಮಾನವು ಆಹ್ಲಾದಕರವಾಗಿರುತ್ತದೆ. ಬಿಹಾರ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಕರ್ನಾಟಕದ ಒಳ ಭಾಗಗಳಲ್ಲಿ ಚಂಡಮಾರುತ ಬೀಸುತ್ತಿದೆ.