ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ಗೆ ಆರು ವಾರಗಳ ಮಧ್ಯಂತರ ಜಾಮೀನು ಸಿಕ್ಕಿದೆ. ವೈದ್ಯಕೀಯ ಚಿಕಿತ್ಸೆಗಾಗಿ ರಾಜ್ಯ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜಾಮೀನಿಗೆ ಕೆಲವು ಷರತ್ತುಗಳನ್ನು ಸಹ ವಿಧಿಸಲಾಗಿದೆ. ಜಾಮೀನು ಅವಧಿ ಆರು ವಾರಗಳ ಕಾಲ ಮಾತ್ರವೇ ಇರಲಿದೆ. ಹೀಗಾಗಿ ದರ್ಶನ್ ಇಂದೇ ಜೈಲಿನಿಂದ ಬಿಡುಗಡೆ ಆಗುತ್ತಾರೆಯೇ? ಎಂಬ ಅನುಮಾನ ಮೂಡಿದೆ.
ಸಾಮಾನ್ಯ ವ್ಯಕ್ತಿಗಳ ಪ್ರಕರಣದಲ್ಲಿ ಜಾಮೀನು ಸಿಕ್ಕ ನಂತರ ಜೈಲಿನಿಂದ ಬಿಡುಗಡೆ ಆಗಲು ಕೆಲ ದಿನಗಳ ಸಮಯ ಬೇಕಾಗುತ್ತದೆ. ಜಾಮೀನು ಆದೇಶದ ಪ್ರತಿಯನ್ನು ನ್ಯಾಯಾಲಯವು ಸಂಬಂಧಪಟ್ಟ ಜೈಲಿಗೆ ಕಳಿಸಬೇಕಾಗುತ್ತದೆ. ಜಾಮೀನುದಾರರು ಷರತ್ತುಗಳನ್ನು ಪೂರೈಸಬೇಕಿರುತ್ತದೆ. ಇದೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲಿಗೆ ಜಾಮೀನು ದೊರೆತ ಮೂವರು ಆರೋಪಿಗಳು ಜಾಮೀನು ದೊರೆತ ವಾರಗಳ ಬಳಿಕ ಜೈಲಿನಿಂದ ಹೊರ ಹೋಗಿದ್ದರು.
ಆದರೆ ದರ್ಶನ್ ಪ್ರಕರಣದಲ್ಲಿ ಈ ರೀತಿ ಇಲ್ಲ. ದರ್ಶನ್ ಬಹುತೇಕ ಇಂದೇ ಅಂದರೆ ಅಕ್ಟೋಬರ್ 30ರಂದೇ ಜೈಲಿನಿಂದ ಹೊರಗೆ ಬರುವ ಸಾಧ್ಯತೆ ಇದೆ. ನ್ಯಾಯಾಲಯದ ಆದೇಶ ಪ್ರತಿಯನ್ನು ಬೈ ಹ್ಯಾಂಡ್ ಬಳ್ಳಾರಿ ಜೈಲಿಗೆ ತಲುಪಿಸಲಾಗುತ್ತದೆ. ಆದೇಶ ಹೊರಬಿದ್ದ ನಂತರ ಆದೇಶ ಪ್ರತಿಯನ್ನು ಪ್ರಿಂಟ್ ಹಾಕಿಸಿಕೊಂಡು ದರ್ಶನ್ ಪರವಾದವರು ಆದೇಶ ಪ್ರತಿಯನ್ನು ಬಳ್ಳಾರಿ ಜೈಲಿಗೆ ಹೋಗಿ ತಲುಪಿಸುತ್ತಾರೆ. ಪ್ರತಿ ತೆಗೆದುಕೊಳ್ಳುವ ಜೈಲು ಸಿಬ್ಬಂದಿ ಅದನ್ನು ಪರಿಶೀಲಿಸಿ ದರ್ಶನ್ ರನ್ನು ಬಿಡುಗಡೆ ಮಾಡಬಹುದು.
ಬೆಂಗಳೂರಿನಿಂದ ಬಳ್ಳಾರಿ ದೂರವೇ ಇದೆಯಾದರೂ ಸಂಜೆ ವೇಳೆಗೆ ದರ್ಶನ್ರ ಜಾಮೀನು ಪ್ರತಿ ಬಳ್ಳಾರಿ ಜೈಲು ತಲುಪಲಿದೆ. ಜಾಮೀನು ಆದೇಶ ದೊರೆತಾಗ ಬಿಡುಗಡೆ ಮಾಡಬೇಕು ಎಂಬ ನಿಯಮ ಇರುವ ಕಾರಣ, ತಡವಾದರೂ ಸಹ ಬಿಡುಗಡೆ ಮಾಡಲಿದ್ದಾರೆ.