ಬೆಳಗಾವಿ: ಪತ್ನಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸುತ್ತಿದ್ದ ಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮಧುರಾ ಕರೆಪ್ಪ ಮಾದರ (30) ಮತ್ತು ಕರೆಪ್ಪ ಗಂಗಪ್ಪ ಮಾದರ (36) ಎಂದು ಗುರುತಿಸಲಾಗಿದೆ. ಮಧುರಾ ಅವರು ಹೊಟ್ಟೆನೋವಿನಿಂದ ಬಳಲುತ್ತಿದ್ದು, ಮನನೊಂದು ವಿಷ ಸೇವಿಸಿದ್ದರು. ತಕ್ಷಣ ಅವರನ್ನು ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಧುರಾ ಕೊನೆಯುಸಿರೆಳೆದಿದ್ದಾರೆ.
ಇತ್ತ ಪತ್ನಿ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ತಿಳಿದು, ಕರೆಪ್ಪ ಬೈಕ್‌ನಲ್ಲಿ ತುರ್ತಾಗಿ ಬೆಳಗಾವಿಯತ್ತ ಬರುತ್ತಿದ್ದಾಗ ಅರವಳ್ಳಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಧಾರವಾಡದಿಂದ ವೇಗವಾಗಿ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಧುರಾ ಮತ್ತು ಕರೆಪ್ಪ ದಂಪತಿ ಮದುವೆಯಾಗಿ 9 ವರ್ಷಗಳಾಗಿದ್ದು, ಇವರಿಗೆ ಒಂದು ಹೆಣ್ಣು ಹಾಗೂ ಎರಡು ಗಂಡು ಮಕ್ಕಳು ಇದ್ದಾರೆ. ಒಂದೇ ದಿನ ತಂದೆ-ತಾಯಿಯನ್ನು ಕಳೆದುಕೊಂಡಿರುವ ಮೂವರು ಮಕ್ಕಳು ಅನಾಥರಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಭದ್ರಾ ನದಿಯಲ್ಲಿ ಈಜಲು ಹೋದ IT ಕಂಪನಿ ಉದ್ಯೋಗಿ ಶವವಾಗಿ ಪತ್ತೆ


















