ಚೆನ್ನೈ: ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಇತ್ತೀಚೆಗೆ ತಮ್ಮನ್ನು ಗುರಿಯಾಗಿಸಿಕೊಂಡ ಆನ್‌ಲೈನ್ ವಂಚನೆಯ ಪ್ರಯತ್ನವೊಂದರ ಕುರಿತು ಸ್ವಾರಸ್ಯಕರ ಕಥೆಯನ್ನು ಹಂಚಿಕೊಂಡಿದ್ದಾರೆ. 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮುಗಿದ ನಂತರ, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ತಮ್ಮ ಸಹ ಆಟಗಾರ ಡೆವೊನ್ ಕಾನ್ವೆ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, ವಿರಾಟ್ ಕೊಹ್ಲಿ ಅವರ ಫೋನ್ ನಂಬರ್ ಪಡೆಯಲು ಪ್ರಯತ್ನಿಸಿದ್ದಾನೆ ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಹಿರಂಗಪಡಿಸಿದ್ದಾರೆ.
ಐಪಿಎಲ್ ಮುಗಿದ ನಂತರ, ಅಶ್ವಿನ್ ಅವರಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ಸಂದೇಶವೊಂದು ಬಂದಿತ್ತು. ಸಂದೇಶ ಕಳುಹಿಸಿದ ವ್ಯಕ್ತಿ ತನ್ನನ್ನು ಡೆವೊನ್ ಕಾನ್ವೆ ಎಂದು ಪರಿಚಯಿಸಿಕೊಂಡು, ಮಾಮೂಲಿ ಕುಶಲೋಪರಿ ಮಾತನಾಡಿದ್ದಾನೆ. ಆರಂಭದಲ್ಲಿ ಇದನ್ನು ನಿಜವೆಂದು ನಂಬಿದ ಅಶ್ವಿನ್, ಸಂಭಾಷಣೆಯನ್ನು ಮುಂದುವರಿಸಿದ್ದಾರೆ. ಆದರೆ, ಸ್ವಲ್ಪ ಸಮಯದ ನಂತರ ಆ ವ್ಯಕ್ತಿ, “ನಾನು ವಿರಾಟ್ ಕೊಹ್ಲಿ ಅವರ ಫೋನ್ ನಂಬರ್ ಕಳೆದುಕೊಂಡಿದ್ದೇನೆ, ದಯವಿಟ್ಟು ಕಳುಹಿಸಬಹುದೇ?” ಎಂದು ಕೇಳಿದ್ದಾನೆ.
ಇದೇ ಹಂತದಲ್ಲಿ ಅಶ್ವಿನ್‌ಗೆ ಅನುಮಾನ ಬಂದರೂ, ತಮ್ಮ ಸಹ ಆಟಗಾರನಿಗೆ ಬೇಸರವಾಗಬಾರದು ಎಂಬ ಕಾರಣಕ್ಕೆ, ತಮ್ಮಲ್ಲಿದ್ದ ವಿರಾಟ್ ಕೊಹ್ಲಿಯ ಹಳೆಯ ಆಸ್ಟ್ರೇಲಿಯಾದ ವಾಟ್ಸಾಪ್ ಸಂಖ್ಯೆಯೊಂದನ್ನು ಕಳುಹಿಸಿದ್ದಾರೆ.
ವಂಚನೆ ಬಯಲಾದದ್ದು ಹೀಗೆ:
ವಂಚಕ ಅಲ್ಲಿಗೇ ನಿಲ್ಲಿಸದೆ, “ನಾನು ರೋಹಿತ್ ಶರ್ಮಾ ಮತ್ತು ಎಂ.ಎಸ್. ಧೋನಿ ಅವರ ನಂಬರ್‌ಗಳನ್ನೂ ಕಳೆದುಕೊಂಡಿದ್ದೇನೆ” ಎಂದು ಕೇಳಿದಾಗ ಅಶ್ವಿನ್‌ಗೆ ಇದು ಯಾರೋ ಮಾಡುತ್ತಿರುವ ತಮಾಷೆ ಅಥವಾ ವಂಚನೆಯ ಪ್ರಯತ್ನ ಎಂಬುದು ಖಚಿತವಾಯಿತು.
ತಕ್ಷಣ ತಮ್ಮ ಚಾಣಾಕ್ಷತನ ಮೆರೆದ ಅಶ್ವಿನ್, ಆ ವ್ಯಕ್ತಿಯನ್ನು ಪರೀಕ್ಷಿಸಲು ಒಂದು ತಂತ್ರ ಹೂಡಿದರು. “ನಾನು ಈ ವರ್ಷ ನಿನಗೆ ಒಂದು ಬ್ಯಾಟ್ ಕೊಟ್ಟಿದ್ದೆನಲ್ಲ, ಅದು ಹೇಗಿದೆ?” ಎಂದು ಮರುಪ್ರಶ್ನೆ ಹಾಕಿದರು. ಇದಕ್ಕೆ ಆ ವಂಚಕ, “ಬ್ಯಾಟ್ ಅದ್ಭುತವಾಗಿದೆ” ಎಂದು ಉತ್ತರಿಸಿದ್ದಾನೆ. ಅಸಲಿಗೆ, ಅಶ್ವಿನ್ ಅವರು ಕಾನ್ವೆಗೆ ಯಾವುದೇ ಬ್ಯಾಟ್ ನೀಡಿರಲಿಲ್ಲ. ಈ ಉತ್ತರದಿಂದ ವಂಚಕನ ಬಣ್ಣ ಬಯಲಾಗುತ್ತಿದ್ದಂತೆ, ಅಶ್ವಿನ್ ತಕ್ಷಣವೇ ಆ ಸಂಖ್ಯೆಯನ್ನು ಬ್ಲಾಕ್ ಮಾಡಿದರು. ನಂತರ ಸಿಎಸ್‌ಕೆ ತಂಡದ ಅಧಿಕೃತ ವಾಟ್ಸಾಪ್ ಗ್ರೂಪ್‌ನಲ್ಲಿ ಪರಿಶೀಲಿಸಿದಾಗ ಅದು ಕಾನ್ವೆಯ ನಂಬರ್ ಅಲ್ಲ ಎಂಬುದು ಖಚಿತವಾಯಿತು.
ಈ ಘಟನೆಯು ಇತ್ತೀಚೆಗೆ ನಡೆದ ಮತ್ತೊಂದು ಪ್ರಕರಣದ ಹಿನ್ನೆಲೆಯಲ್ಲಿ ಮುನ್ನೆಲೆಗೆ ಬಂದಿದೆ. ಕ್ರಿಕೆಟಿಗ ರಜತ್ ಪಾಟೀದಾರ್ ಅವರ ಹಳೆಯ ಸಿಮ್ ಕಾರ್ಡ್ ಪಡೆದಿದ್ದ ಇಬ್ಬರು ಯುವಕರಿಗೆ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರಿಂದ ಕರೆಗಳು ಬಂದಿದ್ದವು. ಆ ಘಟನೆಯನ್ನು ಉಲ್ಲೇಖಿಸುತ್ತಾ ಅಶ್ವಿನ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.



















