ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್ ಕೇವಲ ಮೂರೇ ದಿನಗಳಲ್ಲಿ ಬಾಲ ಬಿಚ್ಚಿದ್ದರು ಎನ್ನಲಾಗಿದೆ. ಜೈಲಿನಲ್ಲಿ ನಟ ದರ್ಶನ್ ರೌಡಿಗಳೊಂದಿಗೆ ಹಾಯಾಗಿ ಕುಳಿತು ಕೈಯಲ್ಲಿ ಸಿಗರೇಟ್, ಕಾಫಿ ಕಪ್ ಹಿಡಿದು ಕುಳಿತಿದ್ದ ಫೋಟೋ ವೈರಲ್ ಆಗಿತ್ತು. ಆನಂತರ ಜೈಲಿನಲ್ಲಿ ದರ್ಶನ್ ರಾಜಾತಿಥ್ಯ ಪಡೆಯುತ್ತಿದ್ದ ಕುರಿತು ತನಿಖೆಗೆ ಸರ್ಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಹಲವಾರು ವಿಷಯಗಳು ಬಹಿರಂಗವಾಗುತ್ತಿವೆ.
ದರ್ಶನ್ ಜೈಲುಪಾಲಾದ ಮೂರೇ ದಿನ ಸಾಮಾನ್ಯ ಕೈದಿಯಂತೆ ಇದ್ದರು. ಆದರೆ, ಆನಂತರ ಬಾಲ ಬಿಚ್ಚಿದ್ದರು ಎನ್ನಲಾಗಿದೆ. ನಾಲ್ಕನೇ ದಿನದಿಂದ ರಾಜಾತಥ್ಯ ಸಿಗುತಿತ್ತಂತೆ. ಜೈಲು ಸಿಬ್ಬಂದಿ ನಿಮ್ಮ ಬ್ಯಾರಕ್ ಗೆ ತೆರಳಿ ಎಂದು ಸೂಚಿಸಿದರೆ, ಸಿನಿಮಾ ಸ್ಟೈಲ್ ನಲ್ಲಿ ದರ್ಶನ್ ಆವಾಜ್ ಹಾಕಿ ‘ಬಿಸ್ಕತ್ ಹಾಕಿಲ್ವಾ’ ಸುಮ್ಮನಿರು ಅಂತಿದ್ದರಂತೆ. ಈಗ ದರ್ಶನ್ ಬಳ್ಳಾರಿ ಜೈಲಿಗೆ ಹೋದ ನಂತರ ಈಗ ದರ್ಶನ್ ಕರಾಳ ಮುಖ ಬಯಲಿಗೆ ಬರುತ್ತಿವೆ.
ದರ್ಶನ್ ಸಿಗರೇಟ್ ಸೇದುವ ಫೋಟೊ ವೈರಲ್ ಆದ ಇನ್ನುಳಿದ ಹಲವು ಜೈಲುಗಳಲ್ಲಿ ಕೂಡ ಕೈದಿಗಳು ಪ್ರತಿಭಟಿಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ಚಿತ್ರಣವೇ ಬದಲಾಗಿದೆ. ಒಂದೆಡೆ ಜೈಲು ಸಿಬ್ಬಂದಿ ಪ್ರತಿಭಟಿಸುತ್ತಿದ್ದರೆ, ಮತ್ತೊಂದೆಡೆ ಕೈದಿಗಳಿಂದಲೂ ಧರಣಿ ನಡೆದಿದೆ ಎನ್ನಲಾಗಿದೆ. ಬೀಡಿ, ಸಿಗರೇಟ್ ಸಿಗುತ್ತಿಲ್ಲ. ಇಲ್ಲಿ ಇರಲು ಆಗುತ್ತಿಲ್ಲ ಎಂದು ಪ್ರತಿಭಟಿಸಿದ್ದಾರೆ ಎನ್ನಲಾಗಿದೆ.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕೂಡ ಬೀಡಿ, ಸಿಗರೇಟ್, ತಂಬಾಕು ನೀಡುವಂತೆ ಕೈದಿಗಳು ಬೆಳಗ್ಗಿನ ಉಪಹಾರ ಬಿಟ್ಟು ಪ್ರತಿಭಟನೆ ನಡೆಸಿದ್ದರು ಎಂದು ತಿಳಿದು ಬಂದಿದೆ.