ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ನಡೆಸಿದ ತನಿಖಾ ವರದಿಯನ್ನು ಇಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದಾರೆ. ಮೈಸೂರು ಲೋಕಾಯುಕ್ತರು ಮುಡಾ ಹಗರಣದಲ್ಲಿ ಎ1 ಸಿದ್ಧರಾಮಯ್ಯ, ಎ2 ಪಾರ್ವತಿ, ಎ3 ಮಲ್ಲಿಕಾರ್ಜುನ ಸ್ವಾಮಿ ಹಾಗೂ ಎ4 ದೇವರಾಜು ಅವರುಗಳಿಗೆ ಕ್ಲೀನ್‌ಚಿಟ್ ನೀಡಿದ್ದು, ಇದೀಗ ಮುಂದೇನು? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಮೈಸೂರಿನ ಲೋಕಾಯುಕ್ತರು, ಉದೇಶ್ ಅವರ ನೇತೃತ್ವದಲ್ಲಿ ಪ್ರಕರಣವನ್ನು ವಿಚಾರಣೆ ನಡೆಸಿದ್ದಾರೆ. ತನಿಖೆಯ ಸಂದರ್ಭದಲ್ಲಿ ಸಿಎಂ ಸಿದ್ಧರಾಮಯ್ಯರಿಗೂ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ವರದಿ ಸಿದ್ಧಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ಧರಾಮಯ್ಯರ ಪಾಲಿಗೆ ಮಾತ್ರ ಈ ಆದೇಶ ಬಹಳ ಮಹತ್ವದ್ದಾಗಿತ್ತು.
ಇತ್ತ ಲೋಕಾಯುಕ್ತರು ಬರೋಬ್ಬರಿ 11 ಸಾವಿರ ಪುಟಗಳ ಬಿ- ರಿಪೋರ್ಟ್ ಸಲ್ಲಿಕೆ ಮಾಡಿದ್ದು, ಅದರಲ್ಲಿ ಸಿಎಂ ಸಿದ್ಧರಾಮಯ್ಯರ ಪಾತ್ರವೇನು ಇಲ್ಲ ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಇತ್ತ ನಿವೇಶನ ಹಂಚಿಕೆ ವಿಚಾರವಾಗಿ ಸಿಎಂ ಸಿದ್ಧರಾಮಯ್ಯ ಯಾವುದೇ ಅಧಿಕಾರ ಬಳಕೆ ಮಾಡಿಲ್ಲ. ಪ್ರಭಾವವನ್ನು ಬೀರಿಲ್ಲ. ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ 14 ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರೆ. ಇದರ ಜೊತೆಗೆ ಜಮೀನು ಕಾನೂನಾತ್ಮಕವಾಗಿ ವರ್ಗಾವಣೆ ಆಗಿದೆ ಎಂದು ಉಲ್ಲೇಖಿಸಿದ್ಧಾರೆ.
ಇನ್ನು ದೇವರಾಜುಗೆ ಸಂಬಂಧಿಸಿದಂತೆ ಡಿನೋಟಿಫೈ ಮಾಡುವಾಗ ಹಲವಾರು ತಪ್ಪುಗಳಾಗಿರುವುದು ಬೆಳಕಿಗೆ ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.