ಬೆಂಗಳೂರು: ಬ್ಯಾಂಕ್ ಗಳ ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡುವಾಗ ಕೆಲವೊಮ್ಮೆ ಹರಿದ ನೋಟುಗಳು ಬರುತ್ತವೆ. ಹರಿದ ನೋಟುಗಳು ಸಿಕ್ಕ ಕೂಡಲೇ ಗ್ರಾಹಕರಿಗೆ ಟೆನ್ಶನ್ ಆಗುತ್ತದೆ. ಯಾವುದೇ ಅಂಗಡಿಗಳಲ್ಲಿ ಹರಿದ ನೋಟುಗಳನ್ನು ಪಡೆಯದ ಕಾರಣ ಏನು ಮಾಡಬೇಕು ಎಂಬ ಚಿಂತೆ ಕಾಡುತ್ತದೆ. ಆದರೆ, ಚಿಂತೆ ಬೇಡ, ಎಟಿಎಂಗಳಲ್ಲಿ ಹರಿದ ನೋಟುಗಳು ಸಿಕ್ಕರೆ ಏನು ಮಾಡಬೇಕು ಎಂಬುದಕ್ಕೆ ಇಲ್ಲಿದೆ ಪರಿಹಾರ.
ಬ್ಯಾಂಕುಗಳಿಗೆ ವಾಪಸ್ ನೀಡಿ
ನೀವು ಯಾವ ಬ್ರ್ಯಾಂಚ್ ನ ಎಟಿಎಂನಲ್ಲಿ ಹಣವನ್ನು ವಿತ್ ಡ್ರಾ ಮಾಡುತ್ತೀರೋ, ಅದೇ ಬ್ಯಾಂಕಿನ ಬ್ರ್ಯಾಂಚಿನಲ್ಲಿ ಹರಿದ ನೋಟುಗಳನ್ನು ಎಕ್ಸ್ ಚೇಂಜ್ ಮಾಡಿಕೊಳ್ಳಬಹುದಾಗಿದೆ. ಬ್ಯಾಂಕುಗಳು ಯಾವುದೇ ಕಾರಣಕ್ಕೂ ಎಟಿಎಂಗಳಲ್ಲಿ ಸಿಕ್ಕ ಹರಿದ ನೋಟುಗಳನ್ನು ತಿರಸ್ಕರಿಸುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) 2016ರಲ್ಲಿಯೇ ಅಧಿಸೂಚನೆ ಹೊರಡಿಸಿದೆ.
ಬ್ಯಾಂಕುಗಳು ತಿರಸ್ಕರಿಸಿದರೆ?
ಆರ್ ಬಿಐ ನಿಯಮಗಳ ಪ್ರಕಾರ, ಎಟಿಎಂಗಳಲ್ಲಿ ಹರಿದ ನೋಟುಗಳನ್ನು ಸಿಕ್ಕರೆ, ಅವುಗಳನ್ನು ಎಕ್ಸ್ ಚೇಂಜ್ ಮಾಡಲು ಅಥವಾ ಬದಲಿ ನೋಟುಗಳನ್ನು ನೀಡಲು ತಿರಸ್ಕರಿಸುವಂತಿಲ್ಲ. ಹಾಗೊಂದು ವೇಳೆ ತಿರಸ್ಕರಿಸಿದರೆ, ಮೇಲಧಿಕಾರಿಗಳಿಗೆ ದೂರು ನೀಡಿದರೆ, ಆ ಬ್ಯಾಂಕಿಗೆ 10 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ.
ನೋಟುಗಳ ಸೀರಿಯಲ್ ನಂಬರ್ ಗಳು, ಮಹಾತ್ಮ ಗಾಂಧೀಜಿ ಅವರ ವಾಟರ್ ಮಾರ್ಕ್ ಇರುವ ಭಾವಚಿತ್ರ, ಆರ್ ಬಿಐ ಗವರ್ನರ್ ಅವರ ಪ್ರತಿಜ್ಞಾವಿಧಿಗೆ ಯಾವುದೇ ಹಾನಿಯಾಗಿರದಿದ್ದರೆ, ಅಂತಹ ನೋಟುಗಳನ್ನು ಬ್ಯಾಂಕುಗಳು ಬದಲಾವಣೆ ಮಾಡಿಕೊಡಲು ತಿರಸ್ಕರಿಸುವಂತಿಲ್ಲ ಎಂಬುದು ಆರ್ ಬಿಐ ನಿಯಮವಾಗಿದೆ.
ಎಕ್ಸ್ ಚೇಂಜ್ ಲಿಮಿಟ್ ಎಷ್ಟಿದೆ?
ಎಟಿಎಂಗಳಲ್ಲಿ ಸಿಕ್ಕ ಹರಿದ ನೋಟುಗಳನ್ನು ಬ್ಯಾಂಕುಗಳು ಯಾವುದೇ ಬ್ಯಾಂಕ್ ಬ್ರ್ಯಾಂಚುಗಳು ಅಥವಾ ಆರ್ ಬಿಐ ಕಚೇರಿಗಳಲ್ಲಿ ಕೂಡ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಆದರೆ, ಒಬ್ಬ ವ್ಯಕ್ತಿಯು ಒಮ್ಮೆ 20 ನೋಟುಗಳು ಅಥವಾ 5 ಸಾವಿರ ರೂಪಾಯಿಗಿಂತ ಮೀರದ ಮೊತ್ತದ ನೋಟುಗಳನ್ನು ಎಕ್ಸ್ ಚೇಂಜ್ ಮಾಡಿಕೊಳ್ಳಬಹುದಾಗಿದೆ ಎಂದು ಆರ್ ಬಿಐ ಸರ್ಕ್ಯುಲರ್ ತಿಳಿಸಿದೆ.