ಕರೂರ್: ತಮಿಳುನಾಡಿನ ಕರೂರಿನಲ್ಲಿ ನಟ-ರಾಜಕಾರಣಿ ವಿಜಯ್ ಅವರ ರಾಜಕೀಯ ರ‍್ಯಾಲಿಯಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತಕ್ಕೆ ಅವರು ಕಾರ್ಯಕ್ರಮಕ್ಕೆ 7 ಗಂಟೆ ವಿಳಂಬವಾಗಿ ಆಗಮಿಸಿದ್ದೇ ಪ್ರಮುಖ ಕಾರಣ ಎಂದು ತಮಿಳುನಾಡು ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ. ಈ ದುರಂತದಲ್ಲಿ ಕನಿಷ್ಠ 39 ಜನರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇದೇ ವೇಳೆ, ಶನಿವಾರ ಕರೂರಿನಲ್ಲಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಆಯೋಜಿಸಿದ್ದ ರಾಜಕೀಯ ಸಮಾವೇಶದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಕಾರಣವಾದ ಪ್ರಮುಖ ಲೋಪಗಳನ್ನು ಕೂಡ ಪೊಲೀಸರು ಪಟ್ಟಿ ಮಾಡಿದ್ದಾರೆ. ಪೊಲೀಸ್ ಮಹಾನಿರ್ದೇಶಕ ಜಿ. ವೆಂಕಟರಾಮನ್ ಅವರ ಪ್ರಕಾರ, ದುರಂತಕ್ಕೆ ಕಾರಣವಾದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
1. ಸಮಯದ ವ್ಯತ್ಯಾಸ: ಸಮಾವೇಶಕ್ಕೆ ಸಂಜೆ 3 ರಿಂದ ರಾತ್ರಿ 10ರವರೆಗೆ ಅನುಮತಿ ಪಡೆಯಲಾಗಿತ್ತು. ಆದರೆ, ಟಿವಿಕೆ ಪಕ್ಷವು ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಿಜಯ್ ಮಧ್ಯಾಹ್ನ 12 ಗಂಟೆಗೆ ಆಗಮಿಸಲಿದ್ದಾರೆ ಎಂದು ಪ್ರಕಟಿಸಿತ್ತು. ಇದರಿಂದಾಗಿ ಜನರು ಬೆಳಗ್ಗೆ 11 ಗಂಟೆಯಿಂದಲೇ ಸ್ಥಳದಲ್ಲಿ ಜಮಾಯಿಸಲು ಆರಂಭಿಸಿದ್ದರು.
2. ವಿಜಯ್ ಬರುವಾಗ 7 ಗಂಟೆ ತಡ: ಮಧ್ಯಾಹ್ನ 12 ಗಂಟೆಗೆ ಬರಬೇಕಿದ್ದ ವಿಜಯ್, ಸಮಾವೇಶದ ಸ್ಥಳಕ್ಕೆ ರಾತ್ರಿ 7:40ಕ್ಕೆ ತಲುಪಿದರು. ಈ ಏಳು ಗಂಟೆಗಳ ವಿಳಂಬದಿಂದಾಗಿ ಬಿಸಿಲಿನಲ್ಲಿ ಕಾಯುತ್ತಿದ್ದ ಜನಸಮೂಹವನ್ನು ನಿಯಂತ್ರಿಸುವುದು ಕಷ್ಟಕರವಾಯಿತು.
3. ನಿರೀಕ್ಷೆ ಮೀರಿದ ಜನಸಂದಣಿ: ಆಯೋಜಕರು ಸುಮಾರು 10,000 ಜನರು ಸೇರಬಹುದೆಂದು ನಿರೀಕ್ಷಿಸಿದ್ದರು. ಆದರೆ, ಸಮಾವೇಶಕ್ಕೆ 27,000ಕ್ಕೂ ಹೆಚ್ಚು ಜನರು ಬಂದಿದ್ದರು. ಈ ಹಿಂದೆ ಟಿವಿಕೆ ರ‍್ಯಾಲಿಗಳಿಗೆ ಕಡಿಮೆ ಜನ ಸೇರಿದ್ದರಿಂದ, ಈ ಬಾರಿ ಇಷ್ಟು ದೊಡ್ಡ ಸಂಖ್ಯೆಯ ಜನರು ಬರಬಹುದೆಂದು ಆಯೋಜಕರೂ ಊಹಿಸಿರಲಿಲ್ಲ.
4. ಅಸಮರ್ಪಕ ಸೌಲಭ್ಯಗಳು: ಗಂಟೆಗಟ್ಟಲೆ ಬಿಸಿಲಿನಲ್ಲಿ ಕಾಯುತ್ತಿದ್ದ ಜನರಿಗೆ ಕುಡಿಯುವ ನೀರು ಮತ್ತು ಆಹಾರದ ಸಮರ್ಪಕ ವ್ಯವಸ್ಥೆ ಇರಲಿಲ್ಲ. ವಿಜಯ್ ಅವರು ತಮ್ಮ ವಾಹನದ ಮೇಲಿನಿಂದ ಜನರಿಗೆ ನೀರಿನ ಬಾಟಲಿಗಳನ್ನು ಎಸೆಯುತ್ತಿರುವ ದೃಶ್ಯಗಳು ವೈರಲ್ ಆಗಿವೆ.
5. ಭದ್ರತಾ ವೈಫಲ್ಯ: ಬೃಹತ್ ಜನಸಂದಣಿಯನ್ನು ನಿಭಾಯಿಸಲು ಕೇವಲ 500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು, ಇದು ಜನಸಾಗರಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿತ್ತು.
ವಿಜಯ್ ಪ್ರತಿಕ್ರಿಯೆ
ಈ ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ವಿಜಯ್, “ನನ್ನ ಹೃದಯ ಒಡೆದುಹೋಗಿದೆ. ಈ ನೋವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಕರೂರಿನಲ್ಲಿ ಪ್ರಾಣ ಕಳೆದುಕೊಂಡ ನನ್ನ ಸಹೋದರ ಸಹೋದರಿಯರ ಕುಟುಂಬಗಳಿಗೆ ನನ್ನ ಸಂತಾಪಗಳು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಈ ಘಟನೆಯ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಸನ್ ನೇತೃತ್ವದಲ್ಲಿ ಆಯೋಗವನ್ನು ರಚಿಸಿದ್ದಾರೆ. ಪೊಲೀಸರು ಜನಸಂದಣಿಯನ್ನು ಅಂದಾಜು ಮಾಡುವಲ್ಲಿ ವಿಫಲರಾದರೇ ಅಥವಾ ಜನರನ್ನು ಹೆಚ್ಚು ಸೇರಿಸುವ ತಂತ್ರವಾಗಿ ವಿಜಯ್ ಅವರ ಆಗಮನವನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಯಿತೇ ಎಂಬ ಬಗ್ಗೆ ಆಯೋಗವು ತನಿಖೆ ನಡೆಸಲಿದೆ. 2026ರ ರಾಜ್ಯ ವಿಧಾನಸಭಾ ಚುನಾವಣೆಗೆಂದು ವಿಜಯ್ ರಾಜ್ಯವ್ಯಾಪಿ ಪ್ರಚಾರ ನಡೆಸುತ್ತಿದ್ದು, ಈ ದುರಂತವು ಅವರ ರಾಜಕೀಯ ಭವಿಷ್ಯದ ಮೇಲೆ ಕರಿನೆರಳು ಬೀರಿದೆ.