ಲಂಡನ್: ಖಗೋಳಶಾಸ್ತ್ರಜ್ಞರು ಸೌರವ್ಯೂಹದ ಮೂಲಕ ಹಾದುಹೋಗುತ್ತಿರುವ ಅಪರೂಪದ ಅಂತರತಾರಾ ವಸ್ತುವೊಂದನ್ನು ಪತ್ತೆ ಹಚ್ಚಿದ್ದು, ಇದಕ್ಕೆ ಸದ್ಯಕ್ಕೆ A11pl3Z ಎಂದು ಹೆಸರಿಟ್ಟಿದ್ದಾರೆ. ನಮ್ಮ ನಕ್ಷತ್ರಪುಂಜದ ಹೊರಗಿನಿಂದ ಇಂತಹ ಒಂದು ವಸ್ತುವನ್ನು ಪತ್ತೆಹಚ್ಚಿರುವುದು ಇದು ಮೂರನೇ ಬಾರಿ.
ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) A11pl3Z ನ ಅಸಾಮಾನ್ಯ ಪಥ ಮತ್ತು ವೇಗದ ಆಧಾರದ ಮೇಲೆ, ಅದು ಅಂತರತಾರಾ ಮೂಲದಿಂದ ಬಂದಿದೆ ಎಂದು ದೃಢಪಡಿಸಿದೆ. ಈ ವಸ್ತುವು ಮೊದಲಿಗೆ ನಾಸಾದ ಅಸ್ಟ್ರಾಯ್ಡ್ ಟೆರೆಸ್ಟ್ರಿಯಲ್-ಇಂಪ್ಯಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಮ್ (ATLAS) ಮೂಲಕ ಗಮನಕ್ಕೆ ಬಂದಿತ್ತು.
ಬಾಹ್ಯಾಕಾಶ ಸಂಸ್ಥೆಯ “ಪ್ಲಾನೆಟರಿ ಡಿಫೆಂಡರ್ಸ್” ಈಗ ಜಾಗತಿಕ ದೂರದರ್ಶಕಗಳ ಜಾಲವನ್ನು ಬಳಸಿ A11pl3Z ಅನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಇದರ ಕಕ್ಷೆಯು ವಿಶಿಷ್ಟವಾಗಿ ಹೈಪರ್‌ಬಾಲಿಕ್ ಆಗಿದೆ ಎಂದು ಅಂದಾಜಿಸಲಾಗಿದೆ.
ಭೂಮಿಗೆ ಯಾವುದೇ ಅಪಾಯವಿಲ್ಲ
ಪ್ರಸ್ತುತ, A11pl3Z ಗುರುಗ್ರಹದ ಕಕ್ಷೆಯೊಳಗೆ ಇದೆ. ಇದು ಅಕ್ಟೋಬರ್‌ನಲ್ಲಿ ಸೂರ್ಯನಿಗೆ ಹತ್ತಿರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆಗ ಅದು ಸುಮಾರು 1.35 ಖಗೋಳ ಘಟಕಗಳ (ಸುಮಾರು 200 ಮಿಲಿಯನ್ ಕಿಲೋಮೀಟರ್) ಒಳಗೆ ಬರಲಿದೆ. ಇದರಿಂದ ಭೂಮಿಗೆ ಯಾವುದೇ ಅಪಾಯ ಆಗುವ ಸಾಧ್ಯತೆಯಿಲ್ಲ, ಆದರೆ ಇದು ಮಂಗಳ ಗ್ರಹಕ್ಕೆ ತುಲನಾತ್ಮಕವಾಗಿ ಹತ್ತಿರದಲ್ಲೇ ಹಾದುಹೋಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
‘ಒಮುಯಾಮುವಾ (2017) ಮತ್ತು ಬೋರಿಸೋವ್ ಧೂಮಕೇತು (2019) ನಂತರ ನಮ್ಮ ಸೌರವ್ಯೂಹವನ್ನು ದಾಟಿದ ಮೂರನೇ ಅಂತರತಾರಾ ವಸ್ತುಗಳ ಪಟ್ಟಿಗೆ ಇದು(A11pl3Z ) ಸೇರ್ಪಡೆಯಾಗಿದೆ. ಇತರ ನಕ್ಷತ್ರ ವ್ಯವಸ್ಥೆಗಳಿಂದ ಬಂದ ವಸ್ತುಗಳ ಸಂಯೋಜನೆ ಮತ್ತು ಮೂಲಗಳ ಬಗ್ಗೆ ಹೊಸ ಮಾಹಿತಿಗಳನ್ನು ಒದಗಿಸಲಿದೆ ಎಂಬ ಆಶಯವನ್ನು ಖಗೋಳಶಾಸ್ತ್ರಜ್ಞರು ಹೊಂದಿದ್ದು, ಅತ್ಯಲ್ಪ ಸಮಯದಲ್ಲೇ ಸಾಧ್ಯವಾದಷ್ಟು ಡೇಟಾವನ್ನು ಸಂಗ್ರಹಿಸಲು ಸಿದ್ಧರಾಗಿದ್ದಾರೆ.